ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಸಂಪೂರ್ಣ ಕೊರೋನಾ ಸೋಂಕು ಮುಕ್ತ ಜಿಲ್ಲೆಯಾಗಿದ್ದು, ಮತ್ತೆ ಗ್ರೀನ್ಝೋನ್ಗೆ ಮರಳಿದೆ.
ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಶನಿವಾರ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಗಾದಿ ಗೌತಮ್ ತಿಳಿಸಿದ್ದಾರೆ. ಈ ಮೂಲಕ ಎಲ್ಲ 18 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದಂತಾಗಿದೆ.
ಕೊರೋನಾ ಕಾಲಿಟ್ಟ ಕೇವಲ 18 ದಿನಗಳಲ್ಲಿ ಜಿಲ್ಲೆ ಹಸಿರು ವಲಯ ಎನ್ನುವ ಹೆಗ್ಗಳಿಕೆಯನ್ನು ಮರಳಿ ದಕ್ಕಿಸಿಕೊಂಡಿದೆ. ರಾಜ್ಯದಲ್ಲಿ ಕೊರೋನಾ ಕಾಣಿಸಿಕೊಂಡ ನಂತರ ಎರಡು ತಿಂಗಳವರೆಗೆ ಜಿಲ್ಲೆ ಗ್ರೀನ್ಝೋನ್ನಲ್ಲೇ ಮುಂದುವರಿದು ಗಮನಸೆಳೆದಿತ್ತು. ಮೇ 19 ರಂದು ತರೀಕೆರೆಯ ಗರ್ಭಿಣಿ ಮಹಿಳೆ ಮತ್ತು ಮೂಡಿಗೆರೆಯ ಸರ್ಕಾರಿ ವೈದ್ಯರೊಬ್ಬರಲ್ಲಿ ಕೊರೋನಾ ಪಾಸಿಟೀವ್ ಇರುವುದಾಗಿ ಪರೀಕ್ಷಾ ವರದಿಗಳು ಹೇಳಿದ್ದವು.
ಆದರೆ ಈ ಎರಡೂ ಪ್ರಕರಣಗಳಲ್ಲಿ ಫಾಲ್ಸ್ ಪಾಸಿಟೀವ್ ಫಲಿತಾಂಶ ಬಂದಿತ್ತು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿತ್ತು. ಇದಾದ ನಂತರ ಎನ್ಆರ್ಪುರ, ಕೊಪ್ಪ, ಶೃಂಗೇರಿ ಹಾಗೂ ಮೂಡಿಗೆರೆ ತಾಲ್ಲೂಕುಗಳಲ್ಲಿ ಒಟ್ಟು 16 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇವರೆಲ್ಲರೂ ಮಹರಾಷ್ಟ್ರ ಹಾಗೂ ದೆಹಲಿಯಿಂದ ಬಂದವರಾಗಿದ್ದರು.
ಎಲ್ಲ ಸೋಂಕಿತರಿಗೆ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಪೈಕಿ ನಿನ್ನೆ ವರೆಗೆ 14 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಉಳಿದಿಬ್ಬರನ್ನು ಶನಿವಾರ ಬಿಡುಗಡೆಗೊಳಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.