ಚಿಕ್ಕಮಗಳೂರು: ಅಂಫಾನ್ ಚಂಡಮಾರುತದ ಪರಿಣಾಮ ಭಾನುವಾರ ರಾತ್ರಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಸುರಿದಿದೆ. ಮಲೆನಾಡಿನ ಕೆಲವಡೆ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗಿದ್ದರೆ, ಬಯಲು ತಾಲ್ಲೂಕುಗಳಲ್ಲಿ ಹದವಾಗಿ ಸುರಿದಿದೆ.
ರಾತ್ರಿ 2.30 ರ ವೇಳಗೆ ಗುಡುಗಿನ ಸದ್ದಿನೊಂದಿಗೆ ಬಿರುಸಾಗಿ ಸುರಿದ ಮಳೆಯಿಂದ ಮರಗಳು ನೆಲಕ್ಕುರುಳಿವೆ. ನಗರ ಹಾಗೂ ಪಟ್ಟಣಗಳಲ್ಲಿ ರಸ್ತೆ ಮೇಲೆ ನೀರು ಹರಿದಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಸಂಕಷ್ಟ ತಂದಿದೆ.
ಸುಮಾರು 1 ಗಂಟೆ ಸಮಯ ಧೋ… ಎಂದು ಸುರಿದ ಮಳೆ ಇಡೀ ಜಿಲ್ಲೆಯನ್ನು ತಂಪಾಗಿಸಿದೆ. ಬಯಲಿನ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲ್ಲೂಕುಗಳಲ್ಲಿ ಹೊಲ, ಗದ್ದೆಗಳು ಕೆಸರಾಗುವಂತೆ ಹದವಾಗಿ ಮಳೆ ಸುರಿದಿದೆ. ಈ ವರ್ಷದ ಬೇಸಿಗೆಯಲ್ಲಿ ಆಗಾಗ ಸುರಿದ ಮುಂಗಾರು ಪೂರ್ವ ಮಳೆ ರೈತಾಪಿಯನ್ನು ಸಮಾಧಾನಪಡಿಸಿತ್ತು. ಇದೀಗ ಚಂಡಮಾರುತದ ಪರಿಣಾಮ ಸುರಿದಿರುವ ಮಳೆ ಇನ್ನಷ್ಟು ಸಂತಸವನ್ನು ತಂದಿದೆ.
ಇಡೀ ದಿನ ಜಿಲ್ಲೆಯ ಎಲ್ಲೆಡೆ ತಂಪಾದ ಆಹ್ಲಾದಕರ ವಾತಾವರಣ ಮನೆ ಮಾಡಿದ್ದು, ಇನ್ನೂ ಎರಡು ದಿನಗಳು ಚಂಡಮಾರುತದ ಮಳೆ ಸುರಿಯಲಿದೆ ಎಂದು ಹವಾಮಾನ ವರದಿಗಳು ತಿಳಿಸಿದೆ.