ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸದ್ಯಕ್ಕೆ ಲಾಕ್ಡೌನ್ ವಿಧಿಸುವ ಯೋಚನೆ ಜಿಲ್ಲಾಡಳಿತದ ಮುಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಗಾದಿ ಗೌತಮ್ ತಿಳಿಸಿದ್ದಾರೆ.
ಅಕ್ಕಪಕ್ಕದ ಕೆಲವು ಜಿಲ್ಲೆಗಳಲ್ಲಿ ಲಾಕ್ಡೌನ್ ವಿಧಿಸಲಾಗಿದ್ದರೂ ನಮ್ಮಲ್ಲಿ ಅಂತಹ ಆಲೋಚನೆ ಇಲ್ಲ. ಆದರೂ ಪರಿಸ್ಥಿತಿ ನಿಯಂತ್ರಿಸಲು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳು, ಹೊರ ರಾಜ್ಯಗಳಿಂದ ನಮ್ಮ ಜಿಲ್ಲೆಯ ನಗರ, ಗ್ರಾಮಗಳಿಗೆ ಜನರು ಬಂದಲ್ಲಿ ಈ ಬಗ್ಗೆ ಮಾಹಿತಿಯನ್ನು ಸ್ಥಳೀಯ ಟಾಸ್ಕ್ ಫೋರ್ಸ್ಗಳ ಗಮನಕ್ಕೆ ತರಬೇಕು ಎಂದರು.
ಇತ್ತೀಚೆಗೆ ಮಾಸ್ಕ್ಧರಿಸದವರನ್ನು ಪತ್ತೆ ಹಚ್ಚಲು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 10 ಸಾವಿರ ಮಂದಿಗೆ ತಲಾ 100 ರೂ.ನಂತೆ ದಂಡವಿಧಿಸಲಾಗಿದೆ. ಇದು ಸರಿಯಾದ ಮಾರ್ಗವಲ್ಲ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 6 ಮಂದಿ ಕೊರೋನಾ ಸೋಂಕಿತರು ಸಾವಿಗೀಡಾಗಿದ್ದಾರೆ. ಈ ಪೈಕಿ ಇಬ್ಬರನ್ನು ಸಾವಿನ ನಂತರ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿತ್ತು. ಇನ್ನೆರಡು ಪ್ರಕರಣಗಳಲ್ಲಿ ಸೋಂಕಿತರನ್ನು ಕಾಯಿಲೆ ಉಲ್ಬಣಗೊಂಡು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಮತ್ತೆರಡು ಪ್ರಕರಣಗಳಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಅವರಲ್ಲಿ ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿದ್ದಾರೆ ಎಂದು ಹೇಳಿದ್ದಾರೆ.