ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………….
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಮುಂಗಾರಿನ ಅನುಭವವನ್ನು ಕಟ್ಟಿಕೊಟ್ಟಿದೆ.
ಮಲೆನಾಡು ತಾಲ್ಲೂಕುಗಳಲ್ಲಿ ಶನಿವಾರ ಮಧ್ಯಾಹ್ನದಿಂದಲೆ ಮಳೆ ಸುರಿಯಲಾರಂಭಿಸಿದ್ದು, ಕೆಲವಡೆ ತುಂತುರು ಮತ್ತು ಇನ್ನೂ ಹಲವಡೆ ರಭಸವಾಗಿ ಮಳೆಯಾಗಿದೆ. ಭಾನುವಾರ ಮಧ್ಯಾಹ್ನದವರೆಗೂ ಮಳೆ ಮುಂದುವರಿದ್ದು, ನಂತರ ಕ್ಷೀಣಿಸಿದೆ.
ಭಾನುವಾರ ಬೆಳಗಿನಿಂದಲೇ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲ್ಲುಕಿನಲ್ಲಿ ಮಳೆ ಚುರುಕಾಗಿತ್ತು. ತುಂಗಾ ಹಾಗೂ ಭದ್ರಾ ನದಿ ನೀರಿನ ಮಟ್ಟದಲ್ಲೂ ಸ್ವಲ್ಪ ಏರಿಕೆ ಕಂಡುಬಂದಿತ್ತು. ಆದರೆ ಮಧ್ಯಾಹ್ನದ ವೇಳಗೆ ಮಳೆ ಬಿರುಸು ಕಾಣಿಸಿಕೊಂಡಿತು. ರಾತ್ರಿ ವರೆಗೆ ಮೊಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ ಚದುರಿದಂತೆ ಮಳೆ ಬಿದ್ದಿದೆ.
ಈ ವರ್ಷ ಮೇ ತಿಂಗಳ ಮಧ್ಯಭಾಗದಲ್ಲೇ ಚಂಡಮಾರುತದ ಪರಿಣಾಮ ಜಿಲ್ಲೆಯದ್ಯಂತ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಚೇತರಿಸಿಕೊಂಡಿದ್ದವು. ಮಳೆ ಕೊಂಚ ಬಿಡುವು ನೀಡಿಲಿ ಎಂದು ಪ್ರಾರ್ಥಿಸಿದ್ದರು. ಹಾಗೆಯೇ ಆಯಿತಾದರೂ ಜುಲೈ ವೇಳಗೆ ಮುಂಗಾರು ಚುರುಕಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಜೂನ್ ಮಧ್ಯದಲ್ಲೇ ಮಳೆ ಆಗುತ್ತಿರುವುದು ಕೆಲವರಲ್ಲಿ ಸಂತಸಕ್ಕೆ ಕಾರಣವಾಗಿದ್ದರೆ, ಮತ್ತೆ ಕೆಲವರಿಗೆ ಸ್ವಲ್ಪದಿನ ಬಿಡುವು ಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಈಗಿನ ಮಳೆ ಮುಂಗಾರಿನ ಅನುಭವ ನೀಡುತ್ತಿದೆ ಆದರೂ ಇದು ಮತ್ತೊಂದು ಚಂಡಮಾರುತದ ಪರಿಣಾಮವೇ ಆಗಿದೆ ಎಂದು ಹೇಳಲಾಗುತ್ತಿದೆ. ಮೇ ಮಧ್ಯಭಾಗದಲ್ಲೇ ಚಂಡಮಾರುತದಿಂದ ಮಳೆ ಆಗಿರುವ ಹಿನ್ನೆಲೆಯಲ್ಲಿ ಇಷ್ಟು ಬೇಗನೇ ಮುಂಗಾರು ಆರಂಭವಾಗಲು ಸಾಧ್ಯವಿಲ್ಲ. ಚಂಡಮಾರುತವು ಮುಂಗಾರು ಮಾರುತಗಳನ್ನು ಹೊತ್ತೊಯ್ದಿರುವ ಹಿನ್ನೆಲೆಯಲ್ಲಿ ತಡವಾಗಿ ಮುಂಗಾರು ಆರಂಭವಾಗುತ್ತದೆ ಎನ್ನುವ ನಂಬಿಕೆ ಗ್ರಾಮೀಣರದ್ದಾಗಿತ್ತು. ಇದರ ನಡುವೆ ಮಳೆಯಾಗುತ್ತಿರುವುದಕ್ಕೆ ಚಂಡಮಾರುತವೇ ಕಾರಣ ಎಂದು ಹೇಳಲಾಗುತ್ತಿದೆ.
ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದಾದ ನಂತರ ಮುಂಗಾರು ಮುಂದುವರಿಯುವ ಸಾಧ್ಯತೆಗಳಿವೆ.