ಚಿಕ್ಕಮಗಳೂರು: ನಗರದ ಬಸವನಹಳ್ಳಿ ಮುಖ್ಯರಸ್ತೆಯ ಮರದ ಬುಡದಲ್ಲಿ ಅಪರಿಚಿತ ಮಹಿಳೆಯೋರ್ವಳು ಇಟ್ಟುಹೋದ ಸೂಟ್ಕೇಸ್ ಸಾರ್ವಜನಿಕ ಆತಂಕಕ್ಕೆ ಕಾರಣವಾಯಿತು.
ಆರೆಂಜ್ ಬಣ್ಣದ ಚೂಡಿದಾರ ಧರಿಸಿದ್ದ ಮಹಿಳೆ ಸಂಜೆ 5 ಗಂಟೆ ವೇಳೆಗೆ ಸೂಟಕೇಸ್ವೊಂದನ್ನು ತಂದು ಕ್ರಿಸ್ಟಲ್ ಇನ್ ಹೋಟೆಲ್ ಮುಂದಿನ ಮರವೊಂದಕ್ಕೆ ಒರಗಿಸಿಟ್ಟು ಜಾಗ ಖಾಲಿ ಮಾಡಿದ್ದಳು.
ಆಕೆ ಅಲ್ಲೇ ನಿಂತು ಮೊಬೈಲ್ ಕರೆಯೊಂದನ್ನು ಸ್ವೀಕರಿಸಿ, ಅನುಮಾನಾಸ್ಪದವಾಗಿ ನಡೆದು ಹೋಗಿದ್ದು ಹೋಟೆಲ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮೇಲೆ ಜನರು ಇನ್ನಷ್ಟು ಭೀತಿಗೊಳಗಾಗಿದರು.
ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಹಾಗೂ ಸಿಬ್ಬಂದಿ ಪರಿಶೀಲಿಸಿ ಸೂಟ್ಕೇಸನ್ನು ರಾಮನಹಳ್ಳಿ ಪೊಲೀಸ್ ಕವಾಯತು ಮೈದಾನಕ್ಕೆ ಸಾಗಿಸಿದರು. ಮಂಗಳೂರಿನಿಂದ ಸ್ಪೋಟಕ ಪತ್ತೆ ಹಾಗೂ ನಿಷ್ಕ್ರಿಯಗೊಳಿಸುವ ತಂಡ ಚಿಕ್ಕಮಗಳೂರಿಗೆ ಹೊರಟಿದ್ದು, ಅವರು ಬಂದ ನಂತರವೇ ಸೂಟ್ಕೇಸ್ನಲ್ಲಿ ಏನಿದೆ ಎನ್ನುವುದು ಗೊತ್ತಾಗಬೇಕಿದೆ.