ದಿಗಂತ ವರದಿ, ಚಿಕ್ಕಮಗಳೂರು:
ನಗರದ ಆರ್ಜಿ ರಸ್ತೆ ಕಾಮಧೇನು ಗಣಪತಿ ದೇವಸ್ಥಾನದ ಬಳಿ ಸಿ.ಎಂ.ಸುರೇಶ್ ಕುಮಾರ್ ಎಂಬುವವರ ಮನೆಯಲ್ಲಿ 1.50 ಕೋಟಿ ರೂ. ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಕಳುವಾಗಿದೆ.
ಕಳೆದ ತಿಂಗಳು 27ರ ಬೆಳಗ್ಗೆಯಿಂದ 28ರ ರಾತ್ರಿವರೆಗೆ ಅಂದರೆ 36 ಗಂಟೆಗಳ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 2 ಕೆಜಿಯಷ್ಟು ಚಿನ್ನ ಮತ್ತು 30 ಕೆಜಿಯಷ್ಟು ಬೆಳ್ಳಿಯ ಆಭರಣಗಳು ಕಳುವಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.
ಮನೆ ಮಾಲೀಕ ಸುರೇಶ್ ಕುಮಾರ್ ನಗರದ ಎಂಜಿ ರಸ್ತೆಯಲ್ಲಿ ಸ್ವರ್ಣಾಂಜಲಿ ಜ್ಯುವೆಲರ್ಸ್ ಎಂಬ ಚಿನ್ನಾಭರಣದ ಅಂಗಡಿ ನಡೆಸುತ್ತಿದ್ದಾರೆ. ಅವರ ಮಗನ ಮದುವೆಗೆಂದು ಮನೆಯವರೆಲ್ಲ ಅಕ್ಟೋಬರ್ 27 ರಂದು ಬೆಳಗ್ಗೆ ಹಾಸನಕ್ಕೆ ತೆರಳಿದ್ದರು. ಮದುವೆ ಮುಗಿಸಿಕೊಂಡು 28 ರ ರಾತ್ರಿ ವಾಪಾಸಾದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಕಂಡುಬಂದಿತ್ತು.
ಮನೆ ಮುಂಭಾಗದ ಬಾಗಿಲು ಬೀಗ ಹಾಕಿದ ಸ್ಥಿತಿಯಲ್ಲೇ ಇತ್ತು. ಮನೆ ಹಿಂಭಾಗದಲ್ಲಿ ಒಂದು ದೊಡ್ಡ ಚರಂಡಿ ಇದೆ. ಅಲ್ಲಿಂದಲೇ ಮಹಡಿಯನ್ನು ಹತ್ತಿ ಹಿಂಭಾಗದ ಬಾಗಿಲನ್ನು ಮುರಿದು ಒಳ ಪ್ರವೇಶ ಮಾಡಿದ್ದಾರೆ. ಎಲ್ಲಾ ಸೇಫ್ ಲಾಕರ್ನ ಕೀಗಳು ಬೆಡ್ರೂಂನಲ್ಲಿರುವ ಒಂದು ಟೇಬಲ್ನ ಬಾಕ್ಸ್ನಲ್ಲಿದ್ದವು ಹಾಗಾಗಿ ಅವು ಕಳ್ಳರ ಕೈಗೆ ಸುಲಭವಾಗಿ ಸಿಕ್ಕಿದ್ದಲ್ಲದೆ ದೊಡ್ಡ ಪ್ರಮಾಣದ ಚಿನ್ನಾಭರಣ ಕಳವಿಗೆ ಕಾರಣವಾಗಿದೆ ಎಂದರು.
ಈ ಬಗ್ಗೆ ತನಿಖೆ ನಡೆಯುತ್ತಿದೆ. ಅದು ಹೊಸದಾಗಿ ನಿರ್ಮಿಸಿರುವ ಮನೆ, ಅಲ್ಲಿ ಫ್ಲಂಬಿಂಗ್, ಫ್ಲೋರಿಂಗ್, ಕಾರ್ಪೆಂಟರಿ ಕೆಲಸ ಮಾಡಿದವರು ಹಾಗೂ ಮದುವೆ ಕಾರಣಕ್ಕೆ ಮನಗೆಗೆ ಲೈಟಿಂಗ್ ಮಾಡಿದವರನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳ ಫೂಟೇಜ್ಗಳನ್ನು ಪಡೆದುಕೊಂಡು ಪ್ರಕರಣದ ಪತ್ತೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಕೆಲವು ತಿಂಗಳ ಹಿಂದೆ ನಗರದ ಎಂಜಿ ರಸ್ತೆಯ ಕೇಸರಿ ಜುವೆಲ್ಲರ್ಸ್ ಅಂಗಡಿ ಮೇಲೆ ಫೈರಿಂಗ್ ನಡೆಸಿ ಕಳವಿಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಪ್ರಕರಣದ ಸುಳಿವುಗಳ ಬಗ್ಗೆ ಪರಿಶೀಲಿಸಿದ್ದೇವೆ. ಈಗ ಆರೋಪಿಗಳಿಗೆ ಬಂದೂಕು ಎಲ್ಲಿಂದ ಬಂದಿರ ಬಹುದು ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಪ್ರಕರಣ ತಡವಾಗಿ ಪತ್ತೆಯಾದರೂ ಪಕ್ಕಾ ಕೆಲಸ ಆಗಬೇಕಾಗುತ್ತದೆ. ಇಂತಹ ಪ್ರಕರಣದಲ್ಲಿ ಆರೋಪಿಗಳ ಉದ್ದೇಶ ಕೇವಲ ಆಭರಣ ಲೂಟಿ ಮಾಡುವುದು ಆಗಿರುವುದರಿಂದ ಕೆಲವು ಬಾರಿ ತನಿಖೆಗೆ ಹೆಚ್ಚಿನ ಕಾಲಾವಕಾಶ ಬೇಕಾಗಿರುತ್ತದೆ. ಫಲಿತಾಂಶ ಸಿಗಲು ಸ್ವಲ್ಪ ತಡವಾಗುತ್ತದೆ. ಆದರೆ ನಾವು ನಿರಂತರ ಪ್ರಯತ್ನ ಮಾಡುತ್ತಿರುತ್ತೇವೆ ಎಂದರು.