ಹೊಸ ದಿಗಂತ ವರದಿ, ಚಿತ್ರದುರ್ಗ:
ಜೆನೆರಿಕ್ ಆಧಾರ್ ಚಿತ್ರದುರ್ಗ ನಗರದಲ್ಲಿ ತನ್ನ ಮೊದಲ ವಿಶೇಷ ಮಳಿಗೆ ಆರಂಭಿಸಿದ್ದು, ೨೦೨೧ ರ ಅಂತ್ಯದ ವೇಳೆಗೆ ರಾಜ್ಯದ ವಿವಿಧೆಡೆಗಳಲ್ಲಿ ಮಳಿಗೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಜೆನರಿಕ್ ಆಧಾರ್ ಸಂಸ್ಥಾಪಕ ಅರ್ಜುನ್ ದೇಶಪಾಂಡೆ ತಿಳಿಸಿದರು.
ನಗರದ ರಂಗಯ್ಯನ ಬಾಗಿಲ ಬಳಿಯ ಯಾದವ ವಿದ್ಯಾರ್ಥಿನಿಲಯದ ಕಟ್ಟಡದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಸಾಯಿ ಜೆನೆರಿಕ್ ಔಷಧಿ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೆನೆರಿಕ್ ಆಧಾರ್ ಎರಡು ವರ್ಷಗಳ ಹಿಂದೆ ಮುಂಬೈನಲ್ಲಿ ಸ್ಥಾಪಿಸಿದ ಕಂಪನಿಯಾಗಿದೆ. ಇದು ಫಾರ್ಮಾ ಸ್ಟಾರ್ಟ್ ಅಪ್ ಮತ್ತು ಗುಣಮಟ್ಟದ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸುವಲ್ಲಿ ಆಕ್ರಮಣಕಾರಿಯಾಗಿ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಚಿತ್ರದುರ್ಗ ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿನ ಜನರಿಗೆ ಸಾಮಾನ್ಯ ಔಷಧಿಯನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದೆ ದೇಶದ ವಿವಿಧ ನಗರಗಳನ್ನು ತಲುಪುವ ಆಶಯ ಹೊಂದಿದೆ ಎಂದು ತಿಳಿಸಿದರು.
ಜೆನೆರಿಕ್ ಆಧಾರ್ನಲ್ಲಿ ಮಾರಾಟವಾಗುವ ಔಷಧಿಗಳು ಮಾರುಕಟ್ಟೆ ಬೆಲೆಗಿಂತ ಶೇಕಡಾ ೫೦ ರಿಂದ ೮೦ ರಷ್ಟು ಕಡಿಮೆ ಇದೆ. ಈ ಔಷಧಿಗಳನ್ನು ಡಬ್ಲ್ಯುಎಚ್ಒ-ಜಿಎಂಪಿ ಪ್ರಮಾಣೀಕೃತ ತಯಾರಕರಿಂದ ಪಡೆಯಲಾಗುತ್ತದೆ. ವೆಚ್ಚ ಕಡಿಮೆ ಮಾಡಲು ಮತ್ತು ಜೆನೆರಿಕ್ ಆಧಾರ್ನ ಮಳಿಗೆಗಳಿಂದ ಔಷಧಿಗಳನ್ನು ಖರೀದಿಸುವ ಮೂಲಕ ಅದನ್ನು ಗ್ರಾಹಕರಿಗೆ ಪಾಕೆಟ್ ಸ್ನೇಹಿಯನ್ನಾಗಿ ಮಾಡುತ್ತದೆ ಎಂದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಳಿಗೆ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜಾರಿ ಮಾಡಿರುವ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ಜೆನೆರಿಕ್ ಔಷಧಿಯೂ ಒಂದು. ಬಡ ಜನರಿಗೆ ರಿಯಾಯಿತಿ ದರದಲ್ಲಿ ಜೆನೆರಿಕ್ ಔಷಧಿಯನ್ನು ಮಾರಾಟ ಮಾಡಲಾಗುವುದು. ಈ ಉದ್ದೇಶದಿಂದ ಇಲ್ಲಿ ಮಳೆಗೆ ಆರಂಭಿಸಲಾಗಿದೆ. ಇದರಿಂದ ಜನರಿಗೆ ಉತ್ತಮ ಸೇವೆ ದೊರೆಯುವಂತಾಗಲಿ ಎಂದು ಆರೈಸಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಆಸ್ಪತ್ರೆಯ ಡಾ.ಮುಕುಂದರಾವ್, ನಾರಾಯಣ ಹೃದಯಾಲಯದ ಡಾ.ಹರೀಶ್, ಡಾ.ಸತೀಶ್, ದೀಪಿಕಾ ಪಾರ್ಕರ್ ಮತ್ತಿತರರು ಹಾಜರಿದ್ದರು.