Wednesday, August 10, 2022

Latest Posts

ಚಿತ್ರದುರ್ಗದಲ್ಲೀಗ ಅಕ್ರಮ ಕಟ್ಟಡಗಳದ್ದೇ ಸದ್ದು, ಮೌನಕ್ಕೆ ಜಾರಿದ ನಗರಸಭೆ ಅಧಿಕಾರಿಗಳು!

ಚಿತ್ರದುರ್ಗ: ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ನಿರ್ಮಿಸಲಾಗುತ್ತಿದ್ದ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ನಗರದ ಗೋಪಾಲಪುರ ರಸ್ತೆಯ ರಾಮದಾಸ್ ಕಾಂಪೌಂಡ್‌ನಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಲ್ಲದೇ ಇನ್ನೂ ಒಂದೆರಡು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಆದರೆ ನಗರಸಭೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ವಿಷಯ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಮಾಜಿ ಸದಸ್ಯ ಟಿ.ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸುಮಾರು ೪-೫ ಅಡಿ ಸಾರ್ವಜನಿಕ ರಸ್ತೆ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲದೇ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಹಾದುಹೋಗಿದ್ದು, ಅದನ್ನು ಲೆಕ್ಕಿಸದೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ನಗರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆಯಬೇಕು. ಅದರಂತೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಬೇಕು. ಆದರೆ ಇವರು ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಸಾರ್ವಜನಿಕ ರಸ್ತೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಗರಸಭೆ ಅಧಿಕಾರಿಗಳು ನೀಡಿರುವ ಯೋಜನಾ ನಕ್ಷೆ ತೋರಿಸುವಂತೆ ಕೇಳಿದರೂ ಕಟ್ಟಡದ ಮಾಲೀಕರು ತೋರಿಸಲು ತಯಾರಿಲ್ಲ. ಹಾಗಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ತಿಳಿಸಿದ್ದೇನೆ ಎಂದು ಟಿ.ರಮೇಶ್ ತಿಳಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ಕಟ್ಟಡ ನಿರ್ಮಾಣಕ್ಕೆ ಪಕ್ಕದಲ್ಲೇ ಹಾದು ಹೋಗಿರುವ ವಿದ್ಯುತ್ ಸರಬರಾಜು ಲೈನ್‌ನಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಬೆಸ್ಕಾಂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಅದರಂತೆ ನಗರಸಭೆಯ ಸಿಬ್ಬಂದಿ ಸಹ ಈ ಹಿಂದೆ ಭೇಟಿ ನೀಡಿ ಪರಿಶೀಲಿಸಿದ್ದರೂ ಎನ್ನಲಾಗಿದೆ. ಆದಾಗ್ಯೂ ನಗರಸಭೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸುತ್ತಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದೆ ಎಂದು ಪೌರಾಯುಕ್ತ ಹನುಮಂತರಾಜು ತಿಳಿಸಿದ್ದಾರೆ.
ನಗರದ ವಿವಿಧ ಪ್ರದೇಶಗಳಲ್ಲಿರುವ ಬಹುತೇಕ ಕಟ್ಟಡಗಳನ್ನು ಸಾರ್ವಜನಿಕ ಜಾಗವನ್ನು ಒತ್ತುವರಿ ಮಾಡಿ ನಿರ್ಮಾಣ ಮಾಡಲಾಗಿದೆ. ನಗರಸಭೆಯಿಂದ ಇಂತಹ ಕಟ್ಟಡಗಳ ಬಳಿಯ ಜಾಗ ತೆರವು ಮಾಡಿಸುವ ಬಗ್ಗೆ ಉಲವು ಬಾರಿ ನಿರ್ಧರಿಸಲಾಗಿತ್ತು. ಆದರೆ ಇಂತಹ ಯಾವುದೇ ತೆರವು ಕಾರ್ಯಾಚರಣೆ ಈವರೆಗೆ ನಡೆದಿಲ್ಲ. ಕಟ್ಟಡ ನಿರ್ಮಾಣವಾದ ಮೇಲೆ ತೆರವು ಮಾಡುವ ಬದಲು ಒತ್ತುವರಿಯಾಗದಂತೆ ಎಚ್ಚರ ವಹಿಸುವುದು ಸೂಕ್ತ. ಈಗ ಈ ಕಟ್ಟಡದ ವಿಚಾರದಲ್ಲಿ ನಗರಸಭೆ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss