ಚಿತ್ರದುರ್ಗ: ಇತ್ತೀಚೆಗೆ ಜರ್ಮನಿ ದೇಶವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಗೋಳ ವಿಜ್ಞಾನ ಮತ್ತು ಭೌತ ವಿಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕು ಯಳಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಈ ರಸಪ್ರಶ್ನೆ ಕಾರ್ಯಕ್ರಮವನ್ನು ಇದೇ ವರ್ಷದ ಏಪ್ರಿಲ್ನಿಂದ ಜುಲೈವರೆಗೆ ಅಂತರ್ಜಾಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವು ಜಗತ್ತಿನಾದ್ಯಂತ ೧೦ ವರ್ಷದಿಂದ ೨೦ ವರ್ಷದೊಳಗಿನ ಮಕ್ಕಳಿಗೆ ಏರ್ಪಾಡಾಗಿತ್ತು.
ಈ ಸ್ಪರ್ಧೆಯು ಮೂರು ಹಂತಗಳನ್ನು ಒಳಗೊಂಡಿದ್ದು, ಮೊದಲ ಹಂತವು ಅರ್ಹತಾ ಹಂತವಾಗಿದ್ದು, ಅರ್ಹತಾ ಹಂತದಲ್ಲಿ ೨೨ ವಿದ್ಯಾರ್ಥಿಗಳು ಹಾಗೂ ಅಂತಿಮ ಅಂತಿಮ ಹಂತದಲ್ಲಿ ೧೧ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದಿರುತ್ತಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯಳಗೋಡು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಜೆ.ಸುಪ್ರೀತಾ ಚಿನ್ನದ ಪದಕ ಪಡೆದಿದ್ದಾರೆ. ಉಳಿದಂತೆ ಜಿ.ಎಸ್.ಅನುಷಾ, ಕೆ.ಎ.ಚಂದನಾ, ವೈಎಂ.ರಶ್ಮಿ, ಎನ್.ಅಂಕಿತಾ, ಕೆ.ಸುಚಿತ್ರಾ, ಕೆ.ಎಸ್.ಮಂಜುಶ್ರೀ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರಿಗೆ ಶಾಲೆಯ ವಿಜ್ಞಾನ ಶಿಕ್ಷಕ ಸಿ.ಜಿ. ಹಾಲೇಶ್ ಮಾರ್ಗದರ್ಶನ ನೀಡಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಹಾ ಕೈಜೋಡಿಸಿತ್ತು. ಶಾಲೆಯ ಮುಖ್ಯಶಿಕ್ಷಕ ಶ್ರೀ ಹನುಮಂತರೆಡ್ಡಿ, ಶಿಕ್ಷಕ ಬಳಗ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸದಸ್ಯ ಎಚ್.ಎಸ್.ಟಿ.ಸ್ವಾಮಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.