Tuesday, June 28, 2022

Latest Posts

ಚಿತ್ರದುರ್ಗ| ಅಕ್ರಮ ಮದ್ಯ ಮಾರಾಟ ತಡೆಯುವಂತೆ ಒತ್ತಾಯಿಸಿ ಜನ ಜಾಗೃತಿ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ

ಚಿತ್ರದುರ್ಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಒತ್ತಾಯಿಸಿ ಜನ ಜಾಗೃತಿ ವೇದಿಕೆ ವತಿಯಿಂದ ಬುಧವಾರ ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿನ ಸಣ್ಣಪುಟ್ಟ ಅಂಗಡಿಗಳಲ್ಲಿ, ರಸ್ತೆ ಬದಿಯ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ತೀವ್ರ ಬರಗಾಲದಲ್ಲಿ ತತ್ತರಿಸಿರುವ ಜಿಲ್ಲೆಯಾದ್ಯಂತ ಜನರು ಕೂಲಿ ಮಾಡಿಕೊಂಡು ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಕುಟುಂಬದ ನಿರ್ವಹಣೆ, ಮಕ್ಕಳನ್ನು ಸಾಕಿ ಸಲಹುತ್ತಿರುವ ಹೆಂಡಂದಿರ ಕೂಲಿ ಹಣವನ್ನು ದೌರ್ಜನ್ಯ ಮಾಡಿ ಗಂಡಂದಿರು ಕಿತ್ತುಕೊಳ್ಳುತ್ತಿದ್ದಾರೆ. ಈ ಹಣದಿಂದ ಮದ್ಯ ಸೇವಿಸಿ ಮನೆಗೆ ಬಂದು ಹೆಂಡತಿ, ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆಂದು ದೂರಿದರು.
ಜನಸಾಮಾನ್ಯರು, ಕೂಲಿ ಕಾರ್ಮಿಕರು, ಬಡವರು, ದಲಿತರು ಮದ್ಯದ ಹಾವಳಿಯಿಂದಾಗಿ ಶಾಂತಿ, ನೆಮ್ಮದಿ ಕಳೆದುಕೊಂಡಿದ್ದಾರೆ. ಇದರಿಂದ ಕುಡಿದು ಕೂಗಾಡುತ್ತಿರುವ ಅನಾಗರೀಕ ಜನರಿಂದ ನೆಮ್ಮದಿ, ಶಾಂತಿಯ ವಾತಾವರಣ ಗ್ರಾಮೀಣ ಪ್ರದೇಶಗಳಲ್ಲಿ ಕದಡುತ್ತಿದೆ. ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ಧಗಳ ನಿಂದನೆಯನ್ನು ಗಲಾಟೆ ಅತಿರೇಕಕ್ಕೆ ಹೋಗಿ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಹೊಡೆದಾಟಗಳಾಗಿ ದ್ವೇಷ ಅಸೂಯೆಯ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಕೂಡಲೇ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಅಬಕಾರಿ ಇಲಾಖೆಯ ನಿರ್ಲಕ್ಷ್ಯ ಧೋರಣೆ : ಮದ್ಯದ ಅಂಗಡಿ, ಬಾರ್ ರೆಸ್ಟೋರೆಂಟ್‌ಗಳಲ್ಲಿ ರಾತ್ರಿ ೧೧ ರ ನಂತರ ಬಾಗಿಲು ಮುಚ್ಚಬೇಕು ಎನ್ನುವ ಕಾನೂನು ಇದೆ. ಆದರೆ ಮದ್ಯ ಮಾರಾಟ ಅಂಗಡಿಗಳವರು ಕಾನೂನು ಉಲ್ಲಂಘಿಸಿ ಮಧ್ಯ ರಾತ್ರಿ ಒಂದು ಗಂಟೆಯವರೆಗೂ ಮದ್ಯ ಮಾರಾಟ ಮಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಆದಾಗ್ಯೂ ಅಬಕಾರಿ ಇಲಾಖೆ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸಂಬಂಧಪಟ್ಟ ಇಲಾಖೆಯವರು ತಕ್ಷಣವೇ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಜಿಲ್ಲಾಧ್ಯಂತ ಮಹಿಳಾ ಸಂಘ ಸಂಸ್ಥೆಗಳವರಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನವೀನ್ ಕೋವೇರಹಟ್ಟಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss