Saturday, July 2, 2022

Latest Posts

ಚಿತ್ರದುರ್ಗ| ಅಪಘಾತ ವಲಯಗಳಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಿಯಾಯೋಜನೆ: ವಿನೋತ್ ಪ್ರಿಯಾ

ಚಿತ್ರದುರ್ಗ: ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆಗಳನ್ನಾಧರಿಸಿ ಜಿಲ್ಲೆಯಲ್ಲಿ ಒಟ್ಟು ೩೬ ಅಪಘಾತ ವಲಯ (ಕಪ್ಪುಚುಕ್ಕೆ ಪ್ರದೇಶ) ಗಳನ್ನಾಗಿ ಗುರುತಿಸಿಸಲಾಗಿದ್ದು, ಈ ಪ್ರದೇಶದಲ್ಲಿ ಸಮಸ್ಯೆಯನ್ನು ಕೇವಲ ತಾತ್ಕಾಲಿಕವಾಗಿ ಪರಿಹರಿಸುವುದು ಮಾತ್ರವಲ್ಲ, ಶಾಶ್ವತ ಪರಿಹಾರಾತ್ಮಕ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಅಪಘಾತಗಳಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ, ಪೊಲೀಸ್, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಗಳನ್ನು ಒಳಗೊಂಡ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದ್ದು, ಸಮೀಕ್ಷೆಯಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿರುವ ಒಟ್ಟು ೩೬ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದರು.
ಪ್ರತಿ ಪ್ರದೇಶದ ೫೦೦ ಮೀ. ವ್ಯಾಪ್ತಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಿರುವುದು ಪತ್ತೆಯಾಗಿದೆ. ಇಂತಹ ಅಪಘಾತ ವಲಯಗಳನ್ನು ಗುರುತಿಸಿ, ಪರಿಹಾರ ಕ್ರಮಗಳನ್ನು ಸೂಚಿಸುವಂತೆ ಸಮೀಕ್ಷಾ ತಂಡಕ್ಕೆ ತಿಳಿಸಲಾಗಿತ್ತು. ಸಮೀಕ್ಷಾ ತಂಡವು ಕೇವಲ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಮಾತ್ರ ಸೂಚಿಸಿದ್ದು, ಇದರಿಂದ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಹೀಗಾಗಿ ಅಪಘಾತ ವಲಯಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಶಾಶ್ವತ ಪರಿಹಾರಾತ್ಮಕ ಕ್ರಿಯಾ ಯೋಜನೆ ತಯಾರಿಸಿ, ಅನುಮೋದನೆಗಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಜಂಟಿ ಸಮೀಕ್ಷಾ ತಂಡದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪಘಾತಗಳ ತಡೆಗೆ ರಾ.ಹೆ. ಅಸಹಕಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ ರಾ.ಹೆ. ೦೪ ಹಾಗೂ ರಾ.ಹೆ. ೧೫೦ ಎ ರಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ಪದೇ ಪದೇ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಈ ಹಿಂದಿನ ಹಲವು ಸಭೆಗಳಲ್ಲಿ ನಿರ್ದೇಶನ ನೀಡಿದಾಗ್ಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕನಿಷ್ಟಪಕ್ಷ ಸಣ್ಣಪುಟ್ಟ ಸುಧಾರಣಾ ಕ್ರಮಗಳೂ ಸೇರಿದಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವ ಕುರಿತು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿ ಸಭೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜವಾಬ್ದಾರಿಯುತ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದು, ಇದರಿಂದಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಅಪಘಾತ ಪ್ರಕರಣಗಳಲ್ಲಿ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳನ್ನೂ ಕೂಡ ತಪ್ಪಿತಸ್ಥರು ಎಂದು ಪರಿಗಣಿಸಿ, ಇವರನ್ನೂ ಕೇಸ್‌ಗಳಲ್ಲಿ ಆರೋಪಿತರನ್ನಾಗಿ ಸೇರ್ಪಡೆ ಮಾಡುವಂತೆ ಕಳೆದ ಸಭೆಯಲ್ಲಿಯೇ ಸೂಚನೆ ನೀಡಲಾಗಿತ್ತು. ಹೀಗಿದ್ದರೂ, ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರೆಸಿರುವುದನ್ನು ಸಭೆಯಲ್ಲಿ ಗಂಭೀರವಾಗಿ ಪರಿಗಣಿಸಲಾಯಿತು.
ಅಪಘಾತ ಪ್ರಕರಣಗಳ ಕುರಿತು ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಸಮಜಾಯಿಷಿ ಉತ್ತರ ನೀಡಲಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಇದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು ಕೂಡ ಸಹಮತಿ ವ್ಯಕ್ತಪಡಿಸಿದರು.
ಅಪಘಾತ ಇಳಿಕೆ ಇಲ್ಲ : ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು ೧೪೨೩ ಗಂಭೀರ ಅಪಘಾತ ಪ್ರಕರಣಗಳು ಸಂಭವಿಸಿದ್ದವು. ಸರ್ಕಾರ ಅಪಘಾತಗಳ ಸಂಖ್ಯೆಯನ್ನು ಕನಿಷ್ಟ ಶೇ.೨೦ ರಷ್ಟಾದರೂ ಕಡಿಮೆಗೊಳಿಸಲು ತೀವ್ರ ಪ್ರಯತ್ನ ಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳಿಗೆ ಸೂಚನೆ ನೀಡಿತ್ತು. ಅದರಂತೆ ತಿಂಗಳಿಗೆ ಅಪಘಾತಗಳ ಸಂಖ್ಯೆಯನ್ನು ೧೦೭ ಕ್ಕಿಂತ ಕಡಿಮೆ ಇರುವ ರೀತಿ ನೋಡಿಕೊಳ್ಳಲು ಗುರಿ ನಿಗದಿಪಡಿಸಿತ್ತು.
ಆದರೆ ಜಿಲ್ಲೆಯಲ್ಲಿ ಈ ವರ್ಷ ಜನವರಿ ತಿಂಗಳಿನಲ್ಲಿ ೧೩೧, ಫೆಬ್ರವರಿ ೧೨೧, ಮಾರ್ಚ್ ನಲ್ಲಿ ೧೪೧ ಸೇರಿದಂತೆ ೩೯೩ ಅಪಘಾತಗಳಾಗಿದ್ದು, ಒಟ್ಟು ೯೬ ಜನ ಮೃತಪಟ್ಟಿದ್ದಾರೆ. ಹೀಗಾಗಿ ಅಪಘಾತ ಕಡಿಮೆಗೊಳಿಸಲು ನಿಗದಿಪಡಿಸಿದ್ದ ಗುರಿ ಮೀರಿ ಅಪಘಾತಗಳು ಸಂಭವಿಸಿವೆ. ಮುಖ್ಯವಾಗಿ ರಾ.ಹೆ. ೦೪ ರಲ್ಲಿ ಶಿರಾ-ಹಿರಿಯೂರು ನಡುವೆ ಬೆಳಗಿನ ಜಾವ ಅಪಘಾತಗಳು ಹೆಚ್ಚುತ್ತಿವೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಹೆದ್ದಾರಿ ಪಕ್ಕದಲ್ಲಿ ರಿಫ್ರೆಷ್‌ಮೆಂಟ್ ಸೌಲಭ್ಯ ಹಾಗೂ ವಾಹನ ಚಾಲಕರು ವಿಶ್ರಾಂತಿ ತೆಗೆದುಕೊಳ್ಳಲು ಸೌಲಭ್ಯ ಕೇಂದ್ರವನ್ನು ರಾ.ಹೆ. ಪ್ರಾಧಿಕಾರದವರು ಪ್ರಾರಂಭಿಸಲು ಕ್ರಮ ಕೈಗೊಂಡಲ್ಲಿ ಅಪಘಾತಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ.
ಇದರ ಜೊತೆಗೆ ರಾ.ಹೆ. ೦೪ ರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ೭೦ ಕಿ.ಮೀ. ಗೆ ಕೇವಲ ೦೧ ಆಂಬುಲೆನ್ಸ್ ಮಾತ್ರ ಒದಗಿಸಿದ್ದು, ಅಪಘಾತ ಸಂಭವಿಸಿದಾಗ ಸ್ಪಂದನೆಯ ಸಮಯ ೦೧ ಗಂಟೆ ಮೀರಲಿದೆ. ಹೀಗಾಗಿ ಗಾಯಾಳುಗಳನ್ನು ರಕ್ಷಿಸುವುದು ತುಂಬಾ ಕಷ್ಟಕರ. ಕನಿಷ್ಟ ಮೂರು ಆಂಬುಲೆನ್ಸ್ ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ದಂಡ ವಿಧಿಸಲು ಸೂಚನೆ : ಚಿತ್ರದುರ್ಗ ನಗರದಲ್ಲಿ ರಾ.ಹೆ. ೦೪ ಹಾಗೂ ರಾ.ಹೆ. ೫೦ ರಲ್ಲಿ ರೈಲ್ವೆ ಮೇಲ್ಸೇತುವೆ ಇದ್ದು, ಇದರ ಕೆಳಭಾಗದಲ್ಲಿ ಕಸದ ರಾಶಿಯೇ ತುಂಬಿದ್ದು, ರಾಷ್ಟ್ರೀಯ ಹೆದ್ದಾರಿಯನ್ನು ನಿರ್ವಹಣೆ ಮಾಡುವವರು ಇದರ ಸ್ವಚ್ಛತೆ ಮಾಡುತ್ತಿಲ್ಲ. ಹಲವು ಬಾರಿ ಈ ಕುರಿತು ದೂರು ನೀಡಿದರೂ ಅಧಿಕಾರಿಗಳು ಸ್ವಚ್ಛಗೊಳಿಸುವ ಗೊಡವೆಗೆ ಹೋಗುತ್ತಿಲ್ಲ. ರಾ.ಹೆ. ೦೪ ರಲ್ಲಿ ಮಾರುತಿ ನಗರ ಬಳಿಯ ಸೇತುವೆ ಬಳಿ ಚರಂಡಿ ನೀರು ಹರಿಯುವುದಲ್ಲದೆ, ಕಸ ರಾಶಿ ರಾಶಿ ಬಿದ್ದಿರುತ್ತದೆ. ಈ ಕುರಿತು ಸಾರ್ವಜನಿಕರ ದೂರುಗಳಿಗೆ ನಗರಸಭೆ ಸ್ಪಂದಿಸಿ, ಪೌರಕಾರ್ಮಿಕರಿಂದ ಸ್ವಚ್ಛ ಮಾಡಿಸಲಾಗುತ್ತಿದೆ.
ಹೆದ್ದಾರಿ ಇಕ್ಕೆಲಗಳನ್ನು ನಿರ್ವಹಣೆ ಮಾಡುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜವಾಬ್ದಾರಿಯಾಗಿದ್ದು, ಅವರು ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸುತ್ತಿಲ್ಲ. ಹೀಗಾಗಿ ನಗರದಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳದಿದ್ದಲ್ಲಿ ಪೌರಾಡಳಿತ ಕಾಯ್ದೆ ಅನ್ವಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದಂಡ ವಿಧಿಸುವಂತೆ ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
೩೬ ಬ್ಲಾಕ್‌ಸ್ಪಾಟ್‌ಗಳು : ಪದೇ ಪದೇ ಸಂಭವಿಸುವ ಅಪಘಾತಗಳನ್ನು ಆಧರಿಸಿ ಜಿಲ್ಲೆಯಲ್ಲಿ ೩೬ ಬ್ಲಾಕ್‌ಸ್ಪಾಟ್ (ಕಪ್ಪುಚುಕ್ಕೆ ಪ್ರದೇಶ) ಗಳನ್ನು ಗುರುತಿಸಲಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಪ್ರಮುಖವಾಗಿ ರಾ.ಹೆ.೪ ರಲ್ಲಿ ಮುರುಘಾಮಠ ಕ್ರಾಸ್, ಜೆಎಂಐಟಿ ಸರ್ಕಲ್, ಮಂದಾರ ಬಾರ್ & ರೆಸ್ಟೋರೆಂಟ್ ಬಳಿ, ಬಸವೇಶ್ವರ ಆಸ್ಪತ್ರೆ, ನಮಕಾಲ್ ಗ್ಯಾರೇಜ್, ಕುಂಚಿಗನಾಳ ಪೆಟ್ರೋಲ್ ಬಂಕ್, ಕ್ಯಾದಿಗೆರೆ & ಲಲ್ಲು ಢಾಬಾ ಮಧ್ಯೆ, ಚಿಕ್ಕಬೆನ್ನೂರು, ಕೊಳಹಾಳ್, ಲಕ್ಷ್ಮೀಸಾಗರ ಗೇಟ್.
ಹೊಳಲ್ಕೆರೆ ತಾಲ್ಲೂಕು ರಾ.ಹೆ. ೧೩ ಮಲ್ಲಾಡಿಹಳ್ಳಿ ಕ್ರಾಸ್, ಹೊಳಲ್ಕೆರೆ ನಗರದ ಚಿಕ್ಕಜಾಜೂರು ಕ್ರಾಸ್, ಟಿ.ನುಲೇನೂರು ಗೇಟ್. ಹಿರಿಯೂರು ತಾಲ್ಲೂಕು ರಾ.ಹೆ. – ೪ ಸಿ.ಜೆ.ಹಳ್ಳಿ -ಮಾಡನಾಯಕನಹಳ್ಳಿ ಮಧ್ಯೆ, ಗಿಡ್ಡೋಬನಹಳ್ಳಿ ಗೇಟ್, ಸ್ವಾಮಿ ಹೋಟೆಲ್, ಜವಗೊಂಡನಹಳ್ಳಿ, ಗೊರ‍್ಲಡಕು ಗೇಟ್, ಕೆ.ಆರ್.ಹಳ್ಳಿ ಗೇಟ್, ಆದಿವಾಲ, ಭೂತಪ್ಪನಗುಡಿ, ಬುರುಜನರೊಪ್ಪ ಗೇಟ್, ರಾ.ಹೆ. ೧೫೦ ಎ ನಲ್ಲಿ ಚನ್ನಮ್ಮನಹಳ್ಳಿ ಗೇಟ್, ಯರಬಳ್ಳಿ ಗೇಟ್, ಗೊಲ್ಲಳ್ಳಿ, ಬ್ಯಾಲೇನಹಳ್ಳಿ ಗೇಟ್.
ಹೊಸದುರ್ಗ ತಾಲ್ಲೂಕು ಮದುರೆ ದಿಬ್ಬ. ಚಳ್ಳಕೆರೆ ತಾಲ್ಲೂಕು ಹೊಟ್ಟೆಪ್ಪನಹಳ್ಳಿ ಗೇಟ್, ಗರಣಿ ಕ್ರಾಸ್, ಎನ್.ಜಿ.ಹಳ್ಳಿ ಗೇಟ್, ಹೊಸಕೆರೆ ಬ್ರಿಡ್ಜ್. ಮೊಳಕಾಲ್ಮೂರು ತಾಲ್ಲೂಕು ಕಮ್ಮಾರಕಾವಲು ಬಿಎಸ್‌ಎನ್‌ಎಲ್ ಟವರ್ ಬಳಿ, ಹಾನಗಲ್ ಕ್ರಾಸ್, ಭೈರಾಪುರ, ತಮ್ಮೇನಹಳ್ಳಿ.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಜಿ. ಹೆಗಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಸ್ಟೇಟ್ ಇಂಜಿನಿಯರ್ ವಿಶ್ವ ಅಂಚಿಟಗೇರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ನಂದಗಾವಿ, ಡಿಡಿಪಿಐ ರವಿಶಂಕರರೆಡ್ಡಿ, ಸೇರಿದಂತೆ ಡಿವೈಎಸ್‌ಪಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss