Sunday, June 26, 2022

Latest Posts

ಚಿತ್ರದುರ್ಗ| ಇಂದಿರಾ ಗಾಂಧಿ ಪುಣ್ಯಸ್ಮರಣೆ, ವಲ್ಲಭಬಾಯ್ ಪಟೇಲ್ ಜನ್ಮದಿನಾಚರಣೆ

ಚಿತ್ರದುರ್ಗ: ಸಣ್ಣ ಸಣ್ಣ ರಾಜ್ಯಗಳನ್ನು ಒಂದುಗೂಡಿಸಿ ಸಮಗ್ರ ಭಾರತವನ್ನು ಪ್ರಜಾಪ್ರಭುತ್ವದಡಿಯಲ್ಲಿ ತಂದವರು ಭಾರತದ ಮೊದಲ ಉಪ ಪ್ರಧಾನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಸ್ಮರಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬ್ರಿಟೀಷ್ ಸರ್ಕಾರ ನಮ್ಮ ದೇಶದ ವಿರುದ್ದ ರೈತರನ್ನು ಜನಸಾಮಾನ್ಯರನ್ನು ಎತ್ತಿಕಟ್ಟಿದ ಸಂದರ್ಭದಲ್ಲಿ ಗಾಂಧಿಗೆ ಹೆಗಲಿಗೆ ಹೆಗಲು ಕೊಟ್ಟು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಸರ್ದಾರ್ ವಲ್ಲಭಭಾಯಿ ಪಟೇಲ್‌ರವರ ಇತಿಹಾಸವನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವ ಪೀಳಿಗೆಯವರು ಮೊದಲು ತಿಳಿದುಕೊಂಡಾಗ ಹೋರಾಟದ ಕಿಚ್ಚು ಮೂಡುತ್ತದೆ ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲ್‌ರವರು ಜಾತಿ, ಧರ್ಮವನ್ನು ಕ್ರೂಢೀರಿಕರಿಸಿಕೊಂಡು ಹೋಗಿದ್ದರ ಪರಿಣಾಮವಾಗಿ ಭಾರತ ಜಾತ್ಯಾತೀತ ದೇಶವಾಗಿ ಉಳಿದುಕೊಂಡಿದೆ. ಗೃಹಮಂತ್ರಿಯಾಗಿದ್ದಾಗ ದೇಶದ ಹಿತದೃಷ್ಟಿಯಿಂದ ಮೇಘಾಲಯದಲ್ಲಿ ೮೦ ರಾಜರ ಸಭೆ ಕರೆದಿದ್ದ ಪಟೇಲ್‌ರವರಿಗೆ ಗಾಂಧೀಜಿಯವರು ’ಸರ್ದಾರ್’ ಎಂಬ ಬಿರುದು ನೀಡಿದರು. ಪಕ್ಷ ಹಾಗೂ ದೇಶದ ಜನರನ್ನು ಸಂಘಟಿಸುವ ಶಕ್ತಿ ಅವರಲ್ಲಿತ್ತು ಎಂದು ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಇದ್ದಿದ್ದರೆ ದೇಶದ ಪ್ರಧಾನಿಯಾಗಿರುತ್ತಿದ್ದರು ಎಂದು ಈಗಿನ ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್‌ರನ್ನು ಮೋದಿ ನೋಡಿಯೇ ಇಲ್ಲ. ದುರದೃಷ್ಟವಶಾತ್ ಸರ್ದಾರ್ ವಲ್ಲಭಭಾಯಿ ಪಟೇಲ್‌ರವರು ದೇಶದ ಪ್ರಧಾನಿಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ದೇಶಕ್ಕಾಗಿಯೇ ಪ್ರಾಣ ತ್ಯಾಗ ಮಾಡಿದ ಇಂದಿರಾಗಾಂಧಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಇವರುಗಳ ಇತಿಹಾಸವನ್ನು ಇಂದಿನ ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ಕೋಮುವಾದಿ ಬಿಜೆಪಿ.ಯವರು ಯಾವ ಹೋರಾಟದಲ್ಲಿಯೂ ಭಾಗಿಯಾಗಿಲ್ಲ. ಆದ್ದರಿಂದ ದೇಶಕ್ಕೆ ಅವರ ಕೊಡುಗೆ ಏನು ಇಲ್ಲ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಅಜ್ಜಪ್ಪ, ನಜ್ಮತಾಜ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್, ಸೈಯದ್ ಖುದ್ದೂಸ್, ನಾಗರಾಜ್ ಜಾನ್ಹವಿ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss