Tuesday, June 28, 2022

Latest Posts

ಚಿತ್ರದುರ್ಗ| ಇಬ್ಬರಿಗೆ ಕೋವಿಡ್ ದೃಢ: ಸೋಂಕಿತರ ಸಂಖ್ಯೆ 45 ಕ್ಕೆ ಏರಿಕೆ

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-೧೯ ವೈರಸ್ ಸಂಬಂಧಿಸಿದಂತೆ ಜಿಲ್ಲೆಯ ಹಿರಿಯೂರಿನ ಇಬ್ಬರಿಗೆ ಕೋವಿಡ್ ಸೋಂಕು ತಗುಲಿರುವುದು ಸೋಮವಾರದ ವರದಿಯಲ್ಲಿ ದೃಢಪಟ್ಟಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ೨೯ ವರ್ಷ ವಯಸ್ಸಿನ ಹಿರಿಯೂರು ನಗರದ ಮಹಿಳೆ ಜೂ. ೧೩ ರಂದು ಆರೋಗ್ಯ ತಪಾಸಣೆಗಾಗಿ ಬೆಂಗಳೂರಿಗೆ ತೆರಳಿದ್ದರು. ಬಳಿಕ ಅವರ ಸಂಬಂಧಿಕರ ಮನೆಯಲ್ಲಿಯೇ ೦೫ ದಿನಗಳ ಕಾಲ ಉಳಿದುಕೊಂಡು, ಜೂ. ೧೮ ರಂದು ಹಿರಿಯೂರಿಗೆ ಮರಳಿದ್ದರು. ಇಲ್ಲಿಗೆ ಮರಳಿದ ಬಳಿಕವೂ ಅನಾರೋಗ್ಯ ಕಂಡುಬಂದ ಕಾರಣದಿಂದಾಗಿ ಜೂ. ೧೯ ರಂದು ಮಹಿಳೆಯ ಹಾಗೂ ಇವರ ೦೮ ವರ್ಷದ ಪುತ್ರ ಮತ್ತು ಪತಿಯ ಗಂಟಲುದ್ರವವನ್ನು ಸಂಗ್ರಹಿಸಿ ಚಿತ್ರದುರ್ಗದ ಪ್ರಯೋಗಾಲಯದಲ್ಲಿಯೇ ಪರೀಕ್ಷೆಗೆ ಒಳಪಡಿಸಲಾಯಿತು.
ಈ ಪೈಕಿ ಮಹಿಳೆ ಹಾಗೂ ಬಾಲಕನ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ವರದಿ ದೃಢಪಡಿಸಿಕೊಳ್ಳಲು, ಮಾದರಿಯನ್ನು ಶಿವಮೊಗ್ಗದಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಎರಡು ಬಾರಿಯೂ ಇಬ್ಬರಲ್ಲಿ ಪಾಸಿಟೀವ್ ಇರುವುದು ವರದಿಯಲ್ಲಿ ದೃಢಪಟ್ಟಿದೆ. ಹೀಗಾಗಿ ಮಹಿಳೆ ಹಾಗೂ ಬಾಲಕನನ್ನು ಚಿತ್ರದುರ್ಗದ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸೋಂಕು ದೃಢಪಟ್ಟವರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರ ಬಗ್ಗೆ ಮಾಹಿತಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಜೂ. ೨೨ ರ ವರದಿ : ಸೋಮವಾರದಂದು ೩೯ ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ೩೯ ಜನರ ವರದಿ ನೆಗೆಟಿವ್ ಬಂದಿದೆ. ವರದಿ ಬರುವ ಯಾವುದೇ ಪ್ರಕರಣ ಬಾಕಿ ಇರುವುದಿಲ್ಲ. ಸದ್ಯ ಜಿಲ್ಲೆಯಲ್ಲಿ ೨೩೭೮ ಜನ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ೪೫ ಕ್ಕೆ ಏರಿಕೆಯಾಗಿದ್ದು, ಈ ಪೈಕಿ ೪೩ ಜನ ಈಗಾಗಲೇ ಗುಣಮುಖರಾಗಿದ್ದಾರೆ. ಈವರೆಗೆ ೪೪೪೨ ಜನರ ಮಾದರಿ ಸಂಗ್ರಹಿಸಲಾಗಿದ್ದು, ೪೨೬೯ ಜನರ ವರದಿ ನೆಗೆಟೀವ್ ಬಂದಿದೆ. ಉಳಿದ ೧೩೦ ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss