ಚಿತ್ರದುರ್ಗ: ಕರ್ನಾಟಕದ ವಿವಿಧ ಆಸ್ಪತ್ರೆಗಳಿಗೆ ಅಮೇರಿಕಾದ ಕನ್ನಡಿಗರ ಒಕ್ಕೂಟದ ಪ್ರಾಯೋಜಕತ್ವದಲ್ಲಿ ಕೋವಿಡ್ ಹೋರಾಟಕ್ಕೆ ಸಂಬಂಧಿಸಿದ ರಕ್ಷಣಾ ಪರಿಕರಗಳನ್ನು ವಿತರಿಸಲಾಗುತ್ತಿದೆ ಎಂದು ಕೋವಿಡ್ ಇಂಡಿಯಾ ಇನಿಷಿಯೇಟಿವ್ ಸಂಸ್ಥೆ ಸಂಸ್ಥಾಪಕರಾದ ಡಾ.ಶಾಲಿನಿ ನಾಲ್ಪಾಡ್ ತಿಳಿಸಿದರು.
ನಗರದ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಕಚೇರಿಯಲ್ಲಿ ಶುಕ್ರವಾರ ಪಿ.ಪಿ.ಕಿಟ್ಗಳು ಹಾಗೂ ಎನ್-೯೫ ಮಾಸ್ಕ್ಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಕೊರೋನಾ ವೈರಸ್ ಹಾವಳಿ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಹಿತದೃಷ್ಠಿಯಿಂದ ಅಮೇರಿಕಾದ ಕನ್ನಡಿಗರು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಕೋವಿಡ್ – ೧೯ ಹೋರಾಟದ ರಕ್ಷಣಾ ಪರಿಕರಗಳನ್ನು ನೀಡುತ್ತಿದ್ದಾರೆ. ಅದರಂತೆ ಅವನ್ನು ನಮ್ಮ ಸಂಸ್ಥೆ ವತಿಯಿಂದ ಎಲ್ಲರಿಗೂ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳು, ಹಾಸನ ಜಿಲ್ಲಾಸ್ಪತ್ರೆ, ಚಿತ್ರದುರ್ಗ ಜಿಲ್ಲಾಸ್ಪತ್ರೆ ಹಾಗೂ ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಸೇರಿದಂತೆ ನಾಡಿನ ವಿವಿಧ ಆಸ್ಪತ್ರೆಗಳಿಗೆ ರಕ್ಷಣಾ ಪರಿಕರಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ೩೫ ಸಾವಿರ ಪಿ.ಪಿ. ಕಿಟ್ಗಳು ಹಾಗೂ ೨೦ ಸಾವಿರ ಎನ್-೯೫ ಮಾಸ್ಕ್ಗಳನ್ನು ವಿತರಿಸಲಾಗಿದೆ. ಚಿತ್ರದುರ್ಗ ಜಿಲ್ಲಾಶ್ಪತ್ರೆಗೆ ೧೦೦ ಪಿ.ಪಿ.ಕಿಟ್ಗಳು ಹಾಗೂ ೧೦೦ ಮಾಸ್ಕ್ಗಳನ್ನು ನೀಡಲಾಗುತ್ತಿದೆ. ಬಸವೇಶ್ವರ ವೈಸ್ಯಕೀಯ ಆಸ್ಪತ್ರೆಗೆ ೫೦ ಪಿ.ಪಿ.ಕಿಟ್ಗಳು ಹಾಗೂ ೫೦ ಮಾಸ್ಕ್ಗಳನ್ನು ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು ೨.೫ ಲಕ್ಷ ಪಿ.ಪಿ.ಕಿಟ್ಗಳು ಹಾಗೂ ಮಾಸ್ಕ್ಗಳನ್ನು ವಿತರಿಸುವ ಉದ್ದೇಶವಿದೆ. ಅದರಂತೆ ದೇಶದಾದ್ಯಂತ ರಕ್ಷಣಾ ಪರಿಕರಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಮುಂಬೈನ ಸುಮಾರು ಆಸ್ಪತ್ರೆಗಳಿಗೆ, ದೆಹಲಿಯಲ್ಲಿ ನೊಯಿಡಾ ಸೇರಿದಂತೆ ಅನೇಕ ಆಸ್ಪತ್ರೆಗಳಿಗೆ ಪಿ.ಪಿ.ಕಿಟ್ಗಳು ಹಾಗೂ ಮಾಸ್ಕ್ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯ ಇನ್ನೂ ಮುಂದುವರಿಯಲಿದೆ ಎಂದು ತಿಳಿಸಿದರು.
ನಾವು ಮಿಡಿ ವಾರಿಯರ್ ಸೆಲ್ ಎಂಬ ಕಾಲ್ ಸೆಂಟರ್ ಮೂಲಕ ಆಸ್ಪತ್ರೆಗಳನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ. ಕಾಲ್ ಸೆಂಟರ್ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರಾಜ್ಯದ ವಿವಿಧೆಡೆಗಳಲ್ಲಿರುವ ಆಸ್ಪತ್ರೆಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಸಂಗ್ರಹಿಸುತ್ತಾರೆ. ಅಲ್ಲಿಗೆ ಬೇಕಾಗುವ ರಕ್ಷಣಾ ಪರಿಕರಗಳ ಬಗ್ಗೆ ಮಾಹಿತಿ ಪಡೆದು ಆ ಆಸ್ಪತ್ರೆಗಳಿಗೆ ಪಿ.ಪಿ.ಕಿಟ್ಗಳು ಹಾಗೂ ಮಾಸ್ಕ್ಗಳನ್ನು ವಿತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿನ ಕೋವಿಡ್ – ೧೯ ಹೋರಾಟಕ್ಕೆ ಯಾವುದೇ ತೊಂದರೆ ಆಗಬಾರದು. ಅಲ್ಲದೇ ಆರೋಗ್ಯ ಸಚಿವ ಬಿ.ಶ್ರೀರಾಮುಲು ಜಿಲ್ಲಾ ಉಸ್ತುವಾಗಿ ಸಚಿವರಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಯಾವುದೇ ಕೊರತೆ ಉಂಟಾಗಬಾರದು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಯಾವುದೇ ಔಷಧಿ, ಪರಿಕರಗಳಿಗೆ ಕೊರತೆ ಇದ್ದಲ್ಲಿ ಕೂಡಲೇ ತಿಳಿಸಿ. ಅದನ್ನು ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಬಸವರಾಜ್, ಶಿವಣ್ಣಾಚಾರ್, ನಾಗರಾಜ್ ಬೇದ್ರೆ ಈ ಸಂದರ್ಭದಲ್ಲಿ ಹಾಜರಿದ್ದರು.