Wednesday, August 17, 2022

Latest Posts

ಚಿತ್ರದುರ್ಗ| ಗ್ರಾ.ಪಂ.ಗಳಲ್ಲಿ ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಜಾಗೃತಿ: ಕೃಷ್ಣನಾಯ್ಕ್

ಹೊಸ ದಿಗಂತ ವರದಿ, ಚಿತ್ರದುರ್ಗ:

ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದು ಚಿತ್ರದುರ್ಗ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ್ ಹೇಳಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ನಗರದ ತಾ.ಪಂ. ತರಬೇತಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಕೋಟ್ಪಾ-೨೦೦೩ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಸಾಮರ್ಥ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಮಾರಣಾಂತಿಕ ರೋಗಗಳು ಬರುತ್ತವೆ. ಹಾಗಾಗಿ ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಗ್ರಾಮೀಣ ಜನರಿಗೆ ತಿಳಿವಳಿಕೆ ಮೂಡಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ವಿ.ತುಳಸಿರಂಗನಾಥ್ ಅವರು ತಂಬಾಕಿನಿಂದ ಆಗುವಂತಹ ದುಷ್ಪರಿಣಾಮಗಳ ಮತ್ತು ಕ್ಯಾನ್ಸರ್ ಬಗ್ಗೆ ಉಪನ್ಯಾಸ ನೀಡಿದರು. ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯೆ ಡಾ.ಶೈಲಾರಾಣಿ, ಬಾಯಿಯ ಕ್ಯಾನ್ಸರ್ ಬಗ್ಗೆ ಸವಿವರವಾಗಿ ಉಪನ್ಯಾಸ ನೀಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಕೋಟ್ಪಾ-೨೦೦೩ ಕಾಯ್ದೆಯ ಅಡಿಯಲ್ಲಿ ಬರುವಂತಹ ಸೆಕ್ಷನ್‌ಗಳ ಬಗ್ಗೆ ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು.
ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಮತ್ತು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ತಂಬಾಕು ವ್ಯಸನ ಮುಕ್ತ ಕೇಂದ್ರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ತರಬೇತಿ ಕಾರ್ಯಗಾರದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!