Saturday, August 13, 2022

Latest Posts

ಚಿತ್ರದುರ್ಗ| ಚಳ್ಳಕೆರೆಯ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದ ವ್ಯಕ್ತಿಗೆ ಸೋಂಕು ದೃಢ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ

ಚಿತ್ರದುರ್ಗ: ಚಳ್ಳಕೆರೆಯ ಶಾಲೆಯೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದ ಉತ್ತರ ಪ್ರದೇಶ ರಾಜ್ಯ ಗೋರಕ್‌ಪುರ ಜಿಲ್ಲೆಯ ೨೫ ವರ್ಷದ ವಾಹನ ಚಾಲಕನಿಗೆ (ಪಿ-೧೬೩೦) ಕೋವಿಡ್-೧೯ ವೈರಸ್ ಸೋಂಕು ಇರುವುದು ಶುಕ್ರವಾರದ ವರದಿಯಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
ತಮಿಳುನಾಡು ರಾಜ್ಯದ ಚೆನ್ನೈನಿಂದ ಮೇ ೧೪ ರಂದು ೫೯ ಜನ ಕಾರ್ಮಿಕರು ಈಚರ್ ವಾಹನದಲ್ಲಿ ಉತ್ತರ ಪ್ರದೇಶ ರಾಜ್ಯದ ತಮ್ಮ ಸ್ವಂತ ಊರಿಗೆ ತೆರಳಲು ಹೊರಟು, ಹೊಸೂರು, ಚಿಕ್ಕಬಳ್ಳಾಪುರ, ಪಾವಗಡ ಮೂಲಕ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಗಡಿಯಲ್ಲಿನ ನಾಗಪ್ಪನಹಳ್ಳಿ ಗೇಟ್ ಚೆಕ್‌ಪೋಸ್ಟ್ ಪ್ರದೇಶಕ್ಕೆ ಮೇ ೧೫ ರಂದು ಬಂದಿದ್ದಾರೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು ವಾಹನ ತಡೆದು, ತಪಾಸಣೆ ನಡೆಸಿದಾಗ, ಈ ಕಾರ್ಮಿಕರು ಇ-ಪಾಸ್ ಆಗಲಿ ಅಥವಾ ಸೇವಾಸಿಂಧು ನಲ್ಲಿಯಾಗಲಿ ನೊಂದಣಿಯಾಗದೆ ಪ್ರಯಾಣ ಬೆಳೆಸಿರುವುದು ಕಂಡುಬಂದಿದೆ. ಹೀಗಾಗಿ ವಾಹನ ಚಾಲಕನ ಸಮೇತ ಈ ಎಲ್ಲ ಕಾರ್ಮಿಕರನ್ನು ಚಳ್ಳಕೆರೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.
ಬಳಿಕ ವಾಹನ ಚಾಲಕನಿಗೆ ಜ್ವರದ ಲಕ್ಷಣ ಕಂಡುಬಂದ ಕಾರಣ, ಈತನ ಗಂಟಲುದ್ರವ ಮಾದರಿಯನ್ನು ಮೇ ೧೮ ರಂದು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿಕೊಡಲಾಯಿತು. ಇದೀಗ ೨೫ ವರ್ಷ ವಯಸ್ಸಿನ ವಾಹನ ಚಾಲಕನಿಗೆ ಕೋವಿಡ್-೧೯ ಸೋಂಕು ಇರುವುದು ದೃಢಪಟ್ಟ ವರದಿ ಮೇ ೨೨ ರಂದು ರಾಜ್ಯ ಕಣ್ಗಾವಲು ಘಟಕದಿಂದ ಬಂದಿದ್ದು, ಈತನನ್ನು ಚಿತ್ರದುರ್ಗದ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈತನ ಜೊತೆಗೆ ವಾಹನದಲ್ಲಿ ಬಂದಿದ್ದ ಎಲ್ಲ ೫೮ ಜನರನ್ನೂ ಪ್ರಾಥಮಿಕ ಸಂಪರ್ಕಿತರು ಎಂದು ಪರಿಗಣಿಸಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಮುಂದುವರೆಸಲಾಗಿದೆ.
ಇದರ ಜೊತೆಗೆ ಕ್ವಾರಂಟೈನ್ ಮಾಡಿದ್ದ ಶಾಲೆಯಲ್ಲಿ ಕೆಲಸ ನಿರ್ವಹಿಸಿದ ಎಲ್ಲ ಸಿಬ್ಬಂದಿಗಳನ್ನೂ ಕೂಡ ಗುರುತಿಸಲಾಗಿದೆ. ಇವರೆಲ್ಲರ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಶುಕ್ರವಾರ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ಕಾರ್ಮಿಕರ ತಂಡ ಹಾಗೂ ಕ್ವಾರಂಟೈನ್ ಕೇಂದ್ರದ ಸಿಬ್ಬಂದಿಗಳ ದ್ವಿತೀಯ ಹಂತದ ಸಂಪರ್ಕಿತರ ಮಾಹಿತಿಯನ್ನೂ ಕೂಡ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss