Sunday, July 3, 2022

Latest Posts

ಚಿತ್ರದುರ್ಗ ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸಲು ಶ್ರಮ: ಜಿಲ್ಲಾ ನೋಡಲ್ ಅಧಿಕಾರಿ ಡಾ. ಜಗದೀಶ್

ಚಿತ್ರದುರ್ಗ: ಜಿಲ್ಲೆಯನ್ನು ಮಲೇರಿಯಾ ರೋಗ ಮುಕ್ತಗೊಳಿಸಲು ಆರೋಗ್ಯ ಇಲಾಖೆ ತೀವ್ರ ಶ್ರಮ ವಹಿಸುವ ಅಗತ್ಯವಿದ್ದು, ಪ್ರತಿ ಗ್ರಾಮ ಮಟ್ಟದಲ್ಲಿ ಮಾಹಿತಿ ಶಿಕ್ಷಣದ ಮೂಲಕ ಸಾರ್ವಜನಿಕರಲ್ಲಿ ಕೀಟಜನ್ಯ ರೋಗಗಳ ಬಗ್ಗೆ ಜಾಗೃತಿ ಮೂಡಿಸಿ ರೋಗ ನಿಯಂತ್ರಿಸಬೇಕೆಂದು ಆರೋಗ್ಯ ಇಲಾಖೆ ಜಿಲ್ಲಾ ನೋಡಲ್ ಅಧಿಕಾರಿ ಡಾ. ಜಗದೀಶ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮಂಗಳವಾರದಂದು ಕೀಟಜನ್ಯ ರೋಗದ ಬಗ್ಗೆ ಜಾಗೃತಿ ಹಾಗೂ ಮಲೇರಿಯಾ ವಿರೋಧಿ ಮಾಸಚಾರಣೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮತ್ತು ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸಲು ಹಾಗೂ ೨೦೨೫ ಕ್ಕೆ ಮಲೇರಿಯಾ ನಿವಾರಣೆಯ ಗುರಿಯನ್ನು ಸರ್ಕಾರ ಹೊಂದಿದೆ. ಮುಂದಿನ ದಿನಗಳಲ್ಲಿ ಒಂದು ಪ್ರಕರಣ ಕೂಡ ವರದಿಯಾಗದಂತೆ ಎಲ್ಲಾ ಜ್ವರ ಪ್ರಕರಣಗಳನ್ನು ಶೀಘ್ರ ಪರೀಕ್ಷೆಗೆ ಒಳಪಡಿಸಿ ಪತ್ತೆಹಚ್ಚುವ ಕಾರ್ಯ ಆಗಬೇಕು ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ. ಜಯಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದು ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ದೊಡ್ಡ ಸವಾಲು ಆಗಿದ್ದವು. ಜನರಲ್ಲಿ ಜಾಗೃತಿಯ ಕೊರತೆ ಇತ್ತು. ಅಗತ್ಯ ಸೌಲಭ್ಯ ಸಲಕರಣೆಗಳು ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ೨೦೧೮ ರಲ್ಲಿ ೧೪, ೨೦೧೯ ರಲ್ಲಿ ೦೯ ಹಾಗೂ ೨೦೨೦ ರಲ್ಲಿ ಇದುವರೆಗೆ ೨ ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಈ ವರ್ಷ ‘ಶೂನ್ಯ ಮಲೇರಿಯಾ ನನ್ನಿಂದಲೇ ಪ್ರಾರಂಭ’ ಎಂಬುದು ಘೋಷವಾಕ್ಯವಾಗಿದ್ದು, ಪ್ರತಿಯೊಬ್ಬರೂ ಕೀಟಜನ್ಯ ರೋಗಗಳ ಬಗ್ಗೆ ಜಾಗೃತರಾಗಿ ರೋಗ ನಿವಾರಣೆಗೆ ಶ್ರಮಿಸಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಎಲ್. ಪಾಲಾಕ್ಷ ಮಾತನಾಡಿ, ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡರೆ ಮಲೇರಿಯಾ ಡೆಂಗ್ಯೂ ನಂತಹ ಮಾರಕ ರೋಗಗಳಿಂದ ದೂರವಿರಬಹುದು ಎಂದರು.
ಈ ಹಿಂದೆ ಜಿಲ್ಲೆಯ ಹೊಸದುರ್ಗ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಮಲೇರಿಯಾ ವ್ಯಾಪಕವಾಗಿತ್ತು. ಈಗ ಜಿಲ್ಲೆಯಲ್ಲಿ ವರದಿಯಾಗಿರುವ ಪ್ರಕರಣಗಳಲ್ಲಿ ಎಲ್ಲಾ ಹೊರ ರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರಲ್ಲಿ ಪತ್ತೆಯಾಗಿವೆ ಎಂದು ಹೇಳಿದರು.
ಮಳೆಗಾಲದಲ್ಲಿ ನೀರು ಹೆಚ್ಚು ಸಂಗ್ರಹವಾಗುವುದರಿಂದ ಸೊಳ್ಳೆಗಳು ಹೆಚ್ಚಾಗಿ ಕೀಟಜನ್ಯ ರೋಗಗಳು ಹೆಚ್ಚಾಗುವ ಸಂಭವವಿದ್ದು, ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕೆಂದು ಸಲಹೆ ಮಾಡಿದರು.
ಕಾರ್ಯಕ್ರಮದ ಅನುಷ್ಠಾನಾಧಿಕಾರಿಗಳಾದ ಡಾ. ಪಿ.ಸಿ.ಕುಮಾರಸ್ವಾಮಿ, ಡಾ. ತುಳಸಿರಂಗನಾಥ, ಡಾ. ರೇಣುಪ್ರಸಾದ್, ಡಾ. ಚಂದ್ರಶೇಖರ್ ಕಂಬಾಳಿಮಠ, ಜಿಲ್ಲಾ ಸಹಾಯಕ ಕೀಟಶಾಸ್ತ್ರಜ್ಞೆ ನಂದಿನಿ ಕಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ ಸೇರಿದಂತೆ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss