Friday, July 1, 2022

Latest Posts

ಚಿತ್ರದುರ್ಗ ಜಿಲ್ಲೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಣಾ ಅಭಿಯಾನ

ಹೊಸ ದಿಗಂತ ವರದಿ, ಚಿತ್ರದುರ್ಗ:

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಸಹಯೋಗದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಜ.15 ರಿಂದ ಫೆ.27 ರವರೆಗೆ ಅಭಿಯಾನ ನಡೆಸಲಾಗುವುದು ಎಂದು ಬಜರಂಗದಳ ಶಿವಮೊಗ್ಗ ವಿಭಾಗ ಸಂಚಾಲಕ ಪ್ರಭಂಜನ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದರಂತೆ ರಾಜ್ಯ ಹಾಗೂ ಪ್ರತಿ ಜಿಲ್ಲೆಯಲ್ಲೂ ಅಭಿಯಾನ ನಡೆಯಲಿದೆ. ರಾಜ್ಯದಲ್ಲಿ27,500 ಹಳ್ಳಿಗಳ ಸುಮಾರು 90 ಲಕ್ಷ ರಾಮಭಕ್ತರನ್ನು ತಲುಪುವ ಉದ್ದೇಶವಿದೆ. ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ವಿಶ್ವಸ್ತರದಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.
ಪ್ರತಿ ಐದು ಜನರ ತಂಡಗಳನ್ನು ರಚಿಸಿ ಅಭಿಯಾನ ನಡೆಸಲಾಗುವುದು. ಇಂತಹ ತಂಡಗಳು ಪ್ರತಿ ಹಳ್ಳಿಯ ಪ್ರತಿ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸುವರು. ಸಂಗ್ರಹವಾದ ಹಣವನ್ನು ೪೮ ಗಂಟೆಗಳೊಳಗೆ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. 10 ರಿಂದ 1000 ರೂ.ಗಳವರೆಗೆ ಮುದ್ರಿತ ಕೂಪನ್‌ಗಳ ಮೂಲಕ ದೇಣಿಗೆ ಸಂಗ್ರಹಿಸಲಾಗುವುದು. 2000 ಹಾಗೂ ಹೆಚ್ಚಿನ ಮೊತ್ತ ನೀಡುವ ಭಕ್ತರಿಗೆ ರಸೀದಿ ನೀಡಲಾಗುವುದು. ಅಲ್ಲದೇ ಆದಾಯ ತೆರಿಗೆ ಕಾಯಿದೆಯಡಿ ೮೦ಜೆ ವಿನಾಯಿತಿ ಪಡೆಯಬಹುದು ಎಂದರು.
ಲಾರ್ಸನ್ ಅಂಡ್ ಟುಬ್ರೋ ಸಂಸ್ಥೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮಂದಿರದ ನಿರ್ಮಾಣ ಜವಾಬ್ಧಾರಿ ಹೊತ್ತಿದೆ. ವಿವಿಧ ತಾಂತ್ರಿಕ ಕಂಪನಿಗಳು ಮಂದಿರದ ಅಡಿಪಾಯದ ನೀಲನಕ್ಷೆ ತಯಾರಿಸುತ್ತಿವೆ. 2.7 ಎಕರೆ ಜಾಗದಲ್ಲಿ 54 ಸಾವಿರ ಚದರಡಿ ಜಾಗದಲ್ಲಿ ಮಂದಿರ ನಿರ್ಮಾಣ. 360 ಅಡಿ ಉದ್ದ, 235 ಅಡಿ ಅಗಲವಿದ್ದು, ಮೂರು ಅಂತಸ್ತುಗಳು ಹಾಗೂ ಐದು ಮಂಟಪಗಳಿರುತ್ತವೆ. ನೆಲಮಾಳಿಗೆಯಲ್ಲಿ 160, ಮೊದಲ ಮಹಡಿಯಲ್ಲಿ 132, ಎರಡನೇ ಮಹಡಿಯಲ್ಲಿ 74 ಕಂಬಗಳಿರುತ್ತವೆ ಎಂದು ವಿವರಿಸಿದರು.
ಮಂದಿರದ ಜೊತೆಗೆ ಅಂತರಾಷ್ಟ್ರೀಯ ಮಟ್ಟದ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞಶಾಲೆ, ವೇದ ಪಾಠಶಾಲೆ, ಸತಸಗ ಭವನ, ಪ್ರಸಾದ ವಿನಿಯೋಗ ಸ್ಥಳ, ಅಂಫಿ ಥಿಯೇಟರ್, ಧರ್ಮಶಾಲೆ, ಪ್ರದರ್ಶನಾಲಯ ಸೇರಿದಂತೆ ಮಂದಿರದ ಆವರಣದಲ್ಲಿ ಹಲವು ಸೌಲಭ್ಯಗಳಿರುತ್ತವೆ. ೬೭ ಎಕರೆಯಲ್ಲಿ ಶ್ರೀರಾಮನ ಮಾಹಿರಿಯುಳ್ಳ ರಾಮಪಾರ್ಕ್ ನಿರ್ಮಾಣ ಮಾಡಲಾಗುವುದು. 2024 ರ ವೇಳೆಗೆ ಮಂದಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಮಾವೇಶಗಳು, ಮಹಿಳಾ ಸಮಾವೇಶ ನಡೆಸಲಾಗಿದೆ. ಸದ್ಯದಲ್ಲೇ ಹೋಬಳಿ ಮಟ್ಟದ ಸಮಾವೇಶಗಳನ್ನು ನಡೆಸಲಾಗುವುದು. ಇದರ ಅಂಗವಾಗಿ ಜ.10 ರಂದು ಮಹಾ ಸಾನಿಕ್ ಕಾರ್ಯಕ್ರಮಗಳು ನಡೆಯಲಿವೆ. ಜ.3ರಂದು ನಗರದ ವಿ.ಪಿ.ಬಡಾವಣೆಯಲ್ಲಿ ನಿಧಿ ಸಮರ್ಪಣಾ ಜಿಲ್ಲಾ ಕಾರ್ಯಾಲಯದ ಉದ್ಘಾಟನೆ ನಡೆಯಲಿದೆ. ಸಂತರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಜ.17 ರಂದು ಮಹಿಳೆಯರ ವಿಶೇಷ ಅಭಿಯಾನ ನಡೆಯಲಿದೆ. ಚಿತ್ರನಟಿ ಮಾಳವೀಕ ಚಾಲನೆ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯವಾಹ ಅಭಿಯಾನ ಪ್ರಮುಖ್ ರಾಜಕುಮಾರ್, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಡಾ.ಮಂಜುನಾಥ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss