ಹೊಸ ದಿಗಂತ ವರದಿ,ಚಿತ್ರದುರ್ಗ:
ಜಿಲ್ಲೆಯಲ್ಲಿ ೫ ವರ್ಷದೊಳಗಿನ ೧೫೧೮೫೨ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರಿಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಡಿ ೨೦೨೧ರ ಜ.೩೧ ರಿಂದ ಫೆ.೩ ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಗ್ರಾಮೀಣ ಪ್ರದೇಶದ ೧೧೭೫೧೫ ಹಾಗೂ ನಗರ ಪ್ರದೇಶದ ೩೪೩೩೭ ಮಕ್ಕಳು ಸೇರಿದಂತೆ ಒಟ್ಟು ೧೫೧೮೫೨ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ ೨೩೧೮ ಲಸಿಕಾ ಕಾರ್ಯಕರ್ತರು, ೨೪೦ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ೧೧೫೯ ತಂಡಗಳು ಹಾಗೂ ೧೦೮೪ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ಡಿಎಚ್ಒ ಡಾ.ಫಾಲಾಕ್ಷ ಮಾತನಾಡಿ, ೨೦೨೧ರ ಜ.೧೭ ರಿಂದ ರಾಷ್ಟ್ರಿಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಕೋವಿಡ್ ಲಸಿಕೆ ವಿತರಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈಗ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈಗಾಗಲೇ ಜಿಲ್ಲೆಗೆ ಪೋಲಿಯೋ ಲಸಿಕೆ ಸರಬರಾಜಾಗಿದೆ ಎಂದು ಹೇಳಿದರು.
ಕೋವಿಡ್ ಲಸಿಕೆ ಶೇ.೬೧ ಸಾಧನೆ : ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ವಿರುದ್ಧದ ಲಸಿಕೆಯನ್ನು ಜ.೧೬ ರಿಂದ ಪ್ರಾರಂಭ ಮಾಡಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ೭೯೪೯ ಮಂದಿಗೆ ಲಸಿಕೆ ಹಾಕುವ ಮೂಲಕ ಶೇ.೬೧ ರಷ್ಟು ಸಾಧನೆಯಾಗಿದೆ ಎಂದು ಆರ್ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ ತಿಳಿಸಿದರು.
ಮೊದಲ ಹಂತದ ಲಸಿಕಾ ಅಭಿಯಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಖಾಸಗಿ ಅರೊಗ್ಯ ಇಲಾಖೆ ಸಿಬ್ಬಂದಿ, ಸಿಡಿಪಿಒ ಮೇಲ್ವಿಚಾರಕರಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಸೇರಿ ಒಟ್ಟು ೧೩೧೦೪ ಫಲಾನುಭವಿಗಳು ನೊಂದಣಿಯಾಗಿದ್ದಾರೆ. ೧೩೧೦೪ ಫಲಾನುಭವಿಗಳಲ್ಲಿ ಒಟಟು ೭೯೪೯ ಫಲಾನುಭವಿಗಳು ಲಸಿಕೆ ಪಡೆದಿದ್ದು, ೫೧೫೫ ಫಲಾನುಭವಿಗಳು ಲಸಿಕೆ ಪಡೆಯುವುದು ಬಾಕಿ ಇದೆ ಎಂದರು.
ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್, ಡಾ.ಚಂದ್ರಶೇಖರ್ ಕಂಬಾಳಿಮಠ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.