Tuesday, August 16, 2022

Latest Posts

ಚಿತ್ರದುರ್ಗ| ತಾಳಿಕಟ್ಟೆ ಗ್ರಾಮದ ಯುವತಿಗೆ ಕೊರೋನಾ ಪಾಸಿಟಿವ್, ಗ್ರಾಮವೀಗ ಕಂಟೋನ್ಮೆಂಟ್ ಜೋನ್

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ ೧೭ ವರ್ಷದ ಯುವತಿಗೆ ಕೊರೋನಾ ಪಾಸಿಟಿವ್ ದೃಡಪಟ್ಟ ಹಿನ್ನೆಲೆಯಲ್ಲಿ, ಯುವತಿಯ ಮನೆಯಿಂದ ಒಂದು ಕಿ.ಮೀ. ವ್ಯಾಪ್ತಿಯ ಸುತ್ತಳತೆಯ ಪ್ರದೇಶವನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.
ಯುವತಿಯ ಮನೆ ಹೊಸದುರ್ಗ – ಚನ್ನಗಿರಿ ಮಾರ್ಗದ ಮುಖ್ಯ ರಸ್ತೆಯಲ್ಲಿರುವ ಕಾರಣ ಆ ಮನೆಯ ಮುಂದಿನ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಸಂಚಾರ ಸ್ಥಗಿತಗೊಳಿಸಲಾಗಿದೆ. ಮನೆಯ ಸುತ್ತಮುತ್ತ ಯಾರೂ ಸುಳಿಯದಂತೆ ಎಚ್ಚರವಹಿಲಾಗಿದೆ. ಇನ್ನು ಗ್ರಾಪಂ ಪಿಡಿಒ, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಯ ಅಕ್ಕ ಪಕ್ಕದ ೧೦೦ ಮೀಟರ್ ಅಂತರದಲ್ಲಿ ಹೈಪೊಕ್ಲೋರೈಡ್ ದ್ರಾವಣ ಸಿಂಪರಣೆ ಮಾಡಲಾಗಿದೆ.
ಮನೆಯಿಂದ ಒಂದು ಕಿ.ಮೀ. ವ್ಯಾಪ್ತಿಯನ್ನು ಕಂಟೋನ್ಮೆಂಟ್ ಜೋನ್ ಮಾಡಿರುವ ಕಾರಣ, ಈ ಪ್ರದೇಶದ ಹೋಟೆಲ್, ಬೇಕರಿ ಸೇರಿದಂತೆ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಾಗಿಲು ಹಾಕಿಸಲಾಗಿದೆ. ಅಲ್ಲದೇ ಈ ಭಾಗದ ಜನರು ಸಾಧ್ಯವಾದಷ್ಟು ಮನೆಗಳಲ್ಲೇ ಇರಬೇಕು. ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರ ಬರುವುದಾದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಕೊರೋನಾ ವೈರಸ್ ಪಾಸಿಟಿವ್ ವರದಿ ಬರುತಿದ್ದಂತೆಯೇ ಪ್ರಾಥಮಿಕ ಹಂತದಲ್ಲಿ ಯುವತಿಯ ಸಂಪರ್ಕದಲ್ಲಿದ್ದ ಅಜ್ಜ, ಅಜ್ಜಿ, ಮಾವ, ಅತ್ತೆ, ಇಬ್ಬರು ತಂಗಿಯರು, ಆಸ್ಪತ್ರೆಗೆ ಕರೆದೊಯ್ದಿದ್ದ ಕಾರು ಚಾಲಕ ಹಾಗೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಿದ್ದ ೪ ಜನ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ತಾಲೂಕಿನ ಬೊಮ್ಮನಕಟ್ಟೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ದ್ವಿತೀಯ ಹಂತದ ಸಂಪರ್ಕದಲ್ಲಿದ್ದ ಯುವತಿಯ ಮಾವನ ಪತ್ನಿ, ಮಕ್ಕಳು, ಅತ್ತಿಗೆ, ಆತನ ತಂದೆ, ತಾಯಿ, ಅತ್ತಿಗೆ ಹಾಗೂ ಕಾರು ಚಾಲಕನ ಪತ್ನಿಯನ್ನು ಸ್ಕ್ರೀನಿಂಗ್‌ಗೆ ಒಳಪಡಿಸಿ, ಕೈಗೆ ಸೀಲ್ ಹಾಕಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇವರ ಮನೆಗಳನ್ನು ಒಳಗಡೆಯಿಂದ ಲಾಕ್ ಮಾಡಿಸಲಾಗಿದೆ. ಇವರ ಗಂಟಲು ದ್ರವವನ್ನು ಪಡೆದು ಪರೀಕ್ಷೆ ಕಳುಹಿಸಲಾಗಿದೆ. ಕಾರು ಚಾಲಕನ ಪತ್ನಿ ಗರ್ಬಿಣಿಯಾಗಿದ್ದು, ಆಕೆಯ ಆರೈಕೆ ಬಗ್ಗೆ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ತಾಳಿಕಟ್ಟೆ ಗ್ರಾಮವು ಹೊಳಲ್ಕೆರೆ ತಾಲೂಕಿನ ಗಡಿ ಭಾಗದಲ್ಲಿದ್ದು, ಇಲ್ಲಿಗೆ ಚನ್ನಗಿರಿ ತಾಲೂಕಿನ ಜನತೆಯ ಒಡನಾಟ ಹೆಚ್ಚಾಗಿದೆ. ಅಲ್ಲದೇ ಚನ್ನಗಿರಿ ತಾಲೂಕಿನಲ್ಲಿ ಹೋಟೆಲ್‌ಗಳು ಬಂದ್ ಆಗಿರುವ ಕಾರಣ ತಾಳಿಕಟ್ಟೆಗೆ ಹೆಚ್ಚು ಜನರು ಆಗಮಿಸುತಿದ್ದರು. ತಾಳಿಕಟ್ಟೆ ಗ್ರಾಮದಿಂದ ಕೂಲಿ ಕಾರ್ಮಿಕರು ಸಹ ಚನ್ನಗಿರಿ ತಾಲೂಕಿಗೆ ಜಮೀನುಗಳಿಗೆ ಕೆಲಸಕ್ಕೆ ಹೋಗುತಿದ್ದರು. ಇದರಿಂದಾಗಿ ದಾವಣಗೆರೆಯ ಸೋಂಕು ತಗಲಿರಬಹುದು ಎಂದು ಅನುಮಾನ ಕಾಡುತ್ತಿದೆ. ಪ್ರಕರಣ ಪರಿಶೀಲನೆಯ ನಂತರ ಯುವತಿಗೆ ಸೋಂಕು ತಗುಲಿದ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss