ಹೊಸದಿಗಂತ ವರದಿ, ಚಿತ್ರದುರ್ಗ
ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣ ತಡೆಗಟ್ಟುವುದರ ಜೊತೆಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ 2020ನೇ ಸಾಲಿನ ೪ನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನಿನಲ್ಲಿರುವ ದಂಡನೆಗಳು ಮತ್ತು ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಪಟ್ಟಂತೆ ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಮತಾ ಮಾತನಾಡಿ, 2020-21ನೇ ಸಾಲಿನಲ್ಲಿ 14 ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಸಮಸ್ಯೆ ಇರುವ ಕಡೆ ಸಮಿತಿ ಸದಸ್ಯರು ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸೋಣ ಎಂದು ಸಮಿತಿ ಸದಸ್ಯರು ಹೇಳಿದರು.
24 ಪ್ರಕರಣಗಳಿಗೆ, 26 ಲಕ್ಷ ಪರಿಹಾರ: ಪ್ರಸ್ತುತ ಜಿಲ್ಲೆಯಲ್ಲಿ 2020ರ ಜುಲೈ 01 ರಿಂದ ನವೆಂಬರ್ 15 ರವರೆಗೆ ಒಟ್ಟು 24 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು ರೂ.26,30,750 ಪರಿಹಾರ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಮತಾ ಸಭೆಗೆ ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿಯ 22 ಪ್ರಕರಣಗಳು, ಪರಿಶಿಷ್ಟ ವರ್ಗಕ್ಕೆ ಸಂಬಂಧಿಸಿದಂತೆ 02 ಪ್ರಕರಣಗಳು ಸೇರಿ ಒಟ್ಟು 24 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 03 ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ 12,37,000ರೂ. ಪರಿಹಾರ ಧನ ನೀಡಲಾಗಿದೆ. 01 ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 4,93,750 ರೂ. ಪರಿಹಾರ ಧನ ನೀಡಲಾಗಿದೆ. 20 ಜಾತಿ ನಿಂದನೆ, ಗುಂಪು ಘರ್ಷಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 9,00,000 ರೂ. ಪರಿಹಾರ ಧನ ಮಂಜೂರು ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.