ಹೊಸ ದಿಗಂತ ವರದಿ, ಚಿತ್ರದುರ್ಗ:
ಮನುಷ್ಯ ಸಮಾಜಕ್ಕೆ ಹಾಗೂ ಬದುಕಿಗೆ ಬಹುಮುಖೀಯತೆ ಬಹಳ ಮುಖ್ಯವಾಗಿದೆ. ಅಂದಾಗ ಮನುಷ್ಯನಲ್ಲಿ ಹಲವು ಪ್ರತಿಭೆಗಳು ಹುಟ್ಟಿಕೊಳ್ಳುತ್ತವೆ ಎಂದು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ ಅಭಿಪ್ರಾಯಪಟ್ಟರು.
ಆಶಯ ಪ್ರಕಾಶನ, ಸೃಷ್ಠಿ ಸಾಗರ ಪ್ರಕಾಶನ ಹಾಗೂ ಮದಕರಿ ನಾಯಕ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಜೆ.ಕರಿಯಪ್ಪ ಮಾಳಿಗೆ ಅವರ ’ಬಹುಮುಖಿ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬಹುಮುಖಿ ಪುಸ್ತಕ ಹೆಸರೇ ಆಕರ್ಷಕವಾಗಿದೆ. ಇದರಲ್ಲಿ ಬದುಕಿನ, ಸಂಸ್ಕೃತಿಯ, ಅಸ್ತಿತ್ವದ ಬಹುಮುಖಿಯತೆ ಸೇರಿದಂತೆ ಅನೇಕ ಅರ್ಥಗಳಿವೆ. ಬದುಕಿನ ಅಸ್ತಿತ್ವದ ರೂಪಗಳು ಒಂದೇ ರೂಪ ಹಾಗೂ ನೆಲೆಯನ್ನು ಒಳಗೊಂಡಿಲ್ಲ. ಪರಸ್ಪರ ವೈರುದ್ಧದ ನಡುವೆ ಪ್ರತಿಯೊಬ್ಬ ಮನುಷ್ಯ ಬದುಕಿತ್ತಿದ್ದಾನೆ. ಬಹುಮುಖ ನೆಲೆಯುಳ್ಳವರು ಜನಸಾಮಾನ್ಯ ಹಿನ್ನಲೆಯಲ್ಲಿ ಬಂದವರು ಹಾಗಿದ್ದಾರೆ. ಇಂದಿನ ದಿನಗಳಲ್ಲಿ ಕೋಟ್ಯಂತರ ಜನರು ಬಹುಮುಖಿಯತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ನಮ್ಮ ನೆಲದ, ಜನರ ಸಂಸ್ಕೃತಿಯ, ವೈವಿದ್ಯತೆ ಬಗ್ಗೆ ಹಾಗೂ ನಮ್ಮ ನಡುವೆ ಇರುವ ಪವಾಡ ಪುರುಷರು ಹಾಗೂ ಸಾಧಕರನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ವಿದ್ಯಾವಂತ ಹಾಗೂ ವಿದ್ವಾಂಸ ತನ್ನ ನೆರೆ ಹಾಗೂ ನೆಲೆಯನ್ನು ಶೋಧಿಸಬೇಕು. ಈ ಕೃತಿಯಲ್ಲಿ ಚಿತ್ರದುರ್ಗದ ಹಲವು ಆಯಾಮಗಳನ್ನು ವಿಶ್ಲೇಷಣಾತ್ಮಕವಾಗಿ ಹಾಗೂ ಮಾಹಿತಿ ರೂಪದಲ್ಲಿ ದಾಖಲಿಸಲಾಗಿದೆ ಎಂದರು.
ಜಿ.ಪಂ. ಸಿಇಒ ಟಿ.ಯೋಗೇಶ ಮಾತನಾಡಿ, ಸಾಹಿತ್ಯದ ಓದು ಮನಸ್ಸುನ್ನು ವಿಶಾಲಗೊಳಿಸಿ, ಚಿಂತನೆಯನ್ನು ವಿಸ್ತಾರಗೊಳಿಸುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳು ಇತರೆ ಜ್ಞಾನಶಾಖೆಯ ವಿದ್ಯಾರ್ಥಿಗಳಿಗಿಂತ ಭಿನ್ನ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದರು.
ನಮ್ಮ ಶ್ರೇಷ್ಠ ಸಂಸ್ಕೃತಿ, ನಮ್ಮ ಬದುಕನ್ನು ಎಷ್ಟರಮಟ್ಟಿಗೆ ಅಧ್ಯಯನ ಮಾಡಿದ್ದೇವೆ ಎಂಬುದನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಶ್ರೇಷ್ಠವಾದ ಯಾವುದೇ ಸಾಹಿತ್ಯ ಅದು ಬದುಕಿನಿಂದ ಬರಬೇಕು. ಪ್ರತಿಭೆಯಿಂದ ಕಟ್ಟಿದ ಸಾಹಿತ್ಯ ಸಂತೋಷನ್ನು ಕೊಡಬಹುದು. ಆದರೆ ಬದುಕನ್ನು ಹಸನುಗೊಳಿಸಲು ಗ್ರಾಮೀಣ ಸಂಸ್ಕೃತಿಯ ಪರಂಪರೆಯಿಂದ ಹೊರಬರಬೇಕು ಎಂದು ಹೇಳಿದರು.
ಲೇಖಕ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ತತ್ವಪದಗಳು, ಅಜ್ಞಾತವಲಯಗಳು ನಮ್ಮನ್ನು ಎಚ್ಚರಗೊಳಿಸುವ ಪ್ರಜ್ಞೆಗಳಾಗಿದ್ದು, ಇದರಿಂದ ನಾವುಗಳು ಕ್ರಿಯಾಶೀಲರಾಗಲು ಸಾಧ್ಯ. ನಮಗೆ ಏಕಮುಖ ಬದುಕಿಗಿಂತ ವೈವಿದ್ಯಮಯ ಬದುಕು ಮುಖ್ಯವಾಗಬೇಕು. ಎಲ್ಲರೂ ಬದುಕುಗಳು ಬಹುಮುಖ್ಯ. ಈ ಕೃತಿಯಲ್ಲಿ ನನ್ನ ಅನುಭವಗಳ ಅಭಿವ್ಯಕ್ತಿಯನ್ನು ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಟಿ.ಸುಧಾಕರ್, ಗೌನಹಳ್ಳಿ ಗೋವಿಂದಪ್ಪ, ಮೇಘ ಗಂಗಾಧರ ನಾಯಕ್, ಮದಕರಿ ನಾಯಕ ಸಾಂಸ್ಕೃತಿಕ ವೇದಿಕೆಯ ಗೋಪಾಲಸ್ವಾಮಿ ನಾಯಕ ಹಾಜರಿದ್ದರು. ಗಾಯಕ ಡಿ.ಓ.ಮುರಾರ್ಜಿ ಬಹುಮುಖಿ ಹಾಡುಗಳನ್ನು ಪ್ರಸ್ತುತ ಪಡಿಸಿದರು.