ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕಂದಾಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ಮನೆಗಳ ಫಲಾನುಭವಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಶನಿವಾರ ಹಕ್ಕುಪತ್ರ ವಿತರಿಸಿದರು.
ನಂತರ ಮಾತನಾಡಿದ ಅವರು, ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ಹಕ್ಕುಪತ್ರ ನೀಡಬೇಕೆಂದು ಎಲ್ಲ ಜನಪ್ರತಿನಿಧಿಗಳ ಬೇಡಿಕೆ ಇತ್ತು. ಹಾಗಾಗಿ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಬಡವರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಹಕ್ಕುಪತ್ರ ಮಾರಾಟ ಮಾಡಬೇಡಿ
ಹಕ್ಕುಪತ್ರಗಳಿಂದ ಮುಂದಿನ ದಿನಗಳಲ್ಲಿ ವಿವಿಧ ವಸತಿ ಯೋಜನೆಗಳಡಿ ಮನೆ ಮಂಜೂರಾತಿಗೆ ಸಹಾಯಕವಾಗುತ್ತದೆ. ಸಂಕಷ್ಟದ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಎಲ್ಲರೂ ಸರ್ಕಾರ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯಾರೂ ಕೂಡ ಹಕ್ಕುಪತ್ರ ಮಾರಾಟ ಮಾಡಬಾರದು. ಹಕ್ಕುಪತ್ರ ಪಡೆದ ಎಲ್ಲಾ ಫಲಾನುಭವಿಗಳಿಗೆ ಮಂದಿನ ದಿನಗಳಲ್ಲಿ ಮನೆ ಮಂಜೂರು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
೨೦ ವರ್ಷಗಳಿಂದ ಬಗರ್ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಸಿಕ್ಕಿಲ್ಲ. ಸಾಗುವಳಿ ಚೀಟಿಗಾಗಿ ೦೨ ಸಾವಿರ ಅರ್ಜಿಗಳು ಬಂದಿದೆ. ಅರ್ಜಿಗಳನ್ನು ಪರಿಶೀಲಿಸಿ, ಇನ್ನೂ ಎರಡು ತಿಂಗಳೊಳಗೆ ಸಾಗುವಳಿ ಚೀಟಿ ಕೊಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕುಡಿಯುವ ನೀರು ಪೂರೈಕೆಗೆ ಕ್ರಮ
ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಇನ್ನೂ ಎರಡು ತಿಂಗಳೊಳಗೆ ಕುಡಿಯುವ ನೀರಿನ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದರು.
ತುಂಗಾಭದ್ರಾ ಹಿನ್ನೀರು ಯೋಜನೆಯ ೬೦೬ ಕಿ.ಮೀ ಪೈಪ್ ಲೈನ್ ಕಾಮಗಾರಿ ಮುಗಿದಿದ್ದು, ಕೇವಲ ೧೪೧ ಕಿ.ಮೀ ಪೈಪ್ಲೈನ್ ಕಾಮಗಾರಿ ಬಾಕಿ ಉಳಿದಿದೆ. ಆದಷ್ಟು ಶೀಘ್ರದಲ್ಲಿ ಮೊಳಕಾಲ್ಮುರು ಕ್ಷೇತ್ರಕ್ಕೆ ತುಂಗಾಭದ್ರಾ ಹಿನ್ನೀರು ಯೋಜನೆಯಡಿ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದರು.
೭೮ ಕೆರೆಗಳಿಗೆ ನೀರು
ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಜಿಲ್ಲೆಯ ೭೮ ಕೆರೆಗಳಿಗೆ ನೀರು ಹರಿಸಲು ಕ್ರಮವಹಿಸಲಾಗಿದ್ದು, ಇನ್ನೂ ತಿಂಗಳೊಳಗೆ ನಾಯಕನಹಟ್ಟಿ ಕೆರೆಯಲ್ಲಿ ಪೂಜೆ ಪ್ರಾರಂಭ ಮಾಡಿ ಆದಷ್ಟು ಬೇಗ ೭೮ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ರೂ. ೫ ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಎಸ್ಟಿಪಿ ಮತ್ತು ಟಿಎಸ್ಪಿ ಅನುದಾನದಲ್ಲಿ ರೂ.೨೦೦ ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.
ಮೊಳಕಾಲ್ಮುರು ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಮಂದಿ ನೇಕಾರರಿದ್ದು, ಜವಳಿ ಪಾರ್ಕ್ ನಿರ್ಮಾಣ ಮಾಡುವಂತೆ ಅನೇಕರ ಬೇಡಿಕೆ ಇತ್ತು. ಹಾಗಾಗಿ ಜವಳಿ ಪಾರ್ಕ್ ನಿರ್ಮಾಣಕ್ಕಾಗಿ ೩೦ ಎಕರೆ ಜಮೀನು ಮೀಸರಿಸಿದೆ. ಶೀಘ್ರದಲ್ಲಿ ದೇವಸಮುದ್ರ ಹೋಬಳಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು. ತೋಟಗಾರಿಕೆ ಚಟುವಟಿಕೆಗಳಿಗೆ ೨೧೧ ಎಕರೆ ಜಮಿನು ಮಂಜೂರಾತಿ ಹಾಗಿದ್ದು, ತೋಟಗಾರಿಕೆ ಚಟುವಟಿಕೆಗಳಿಗೆ ಮೀಸಲಿಟ್ಟು, ರೈತರಿಗೆ ಅನುಕೂಲವಾಗುಂತಹ ಕೆಲಸ ಮಾಡಲಾಗುವುದು ಎಂದರು.
ಮೊಳಕಾಲ್ಮೂರು ಪಟ್ಟಣದಲ್ಲಿ ಬೀದಿ ದೀಪಗಳ ಅಲಂಕಾರ ಸೇರಿದಂತೆ ಸುಂದರ ಪಟ್ಟಣವನ್ನಾಗಿಸಲು ರೂ.೩೦ ಕೋಟಿ ವೆಚ್ಚ ಮಾಡಲಾಗುವುದು. ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿದು, ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು , ತಹಶೀಲ್ದಾರ್ ಮಲ್ಲಿಕಾರ್ಜುನ್ , ಜಿ.ಪಂ. ಸದಸ್ಯರಾದ ಶಶಿರೇಖಾ, ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಸುಧಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಭೂತಪ್ಪ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.