Wednesday, August 10, 2022

Latest Posts

ಚಿತ್ರದುರ್ಗ| ಬೆಂಗಳೂರಿನಲ್ಲಿ ನಡೆದ ಗಲಭೆ ಕೃತ್ಯ ಖಂಡಿಸಿ ವಿಹಿಂಪ, ಬಜರಂಗದಳದಿಂದ ಪ್ರತಿಭಟನೆ, ಜಿಲ್ಲಾಧಿಕಾರಿಗೆ ಮನವಿ

ಚಿತ್ರದುರ್ಗ: ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಕೃತ್ಯವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮಹಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂಬುದನ್ನು ನೆಪ ಮಾಡಿಕೊಂಡ ಕಿಡಿಗೇಡಿಗಳು ಕಂಡ ಕಂಡವರ ಮೇಲೆ ದಾಳಿ ನಡೆಸಿದ್ದಾರೆ. ಶಾಸಕರ ಮನೆ ಪೊಲೀಸ್ ಠಾಣೆ, ಪತ್ರಕರ್ತರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಜನಸಾಮಾನ್ಯರ ಮನೆಗಳಿಗೆ ನುಗ್ಗಿ ಮನೆಗಳಲ್ಲಿದ್ದ ಸಾಮಾನುಗಳನ್ನು ಧ್ವಂಸ ಮಾಡಿದ್ದಾರೆ. ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ವಾಹನಗಳು ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿ ರಾಕ್ಷಸೀ ಕೃತ್ಯ ಎಸಗಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೈಗಂಬರ್ ಅವರ ವಿರುದ್ಧದ ಹೇಳಿಕೆ ಕೇವಲ ನೆಪಮಾತ್ರವಾಗಿದೆ. ಆದರೆ ಹಲ್ಲೆಕೋರರು ಪೂರ್ವನಿಯೋಜಿತ ಕೃತ್ಯ ಎಸಗಿರುವುದು ಮೇಲು ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಶಾಸಕರ ಮನೆ, ಪೊಲೀಸ್ ಠಾಣೆ, ಪೊಲೀಶ್ ವಾಹನಗಳಿಗೆ ಬೆಂಕಿ ಹಚ್ಚಿ ದೌರ್ಜನ್ಯ ಎಸಗಿದ್ದಾರೆ. ಹಿಂದೂ ಜನರ ಮನೆಗಳಿಗೆ ನುಗ್ಗಿ ಅಮಾನವೀಯವಾಗಿ ವರ್ತಿಸಿದ್ದಾರೆ. ಮನೆಗಳ ಮುಂದಿನ ವಾಹನಗಳಿಗೆ ಬೆಂಕಿ ಹಾಕಿ ಸುಟ್ಟಿರುವುದು ಅಮಾನುಷ ಕೃತ್ಯದ ಪ್ರತೀಕವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ನೆಲದ ಕಾನೂನಿಗೆ ಗೌರವ ನೀಡದ ಗಲಭೆಕೋರರು ಈ ದೇಶದ ಸಂವಿಧಾನ, ಕಾನೂನು ಸುವ್ಯವಸ್ಥೆ, ಪ್ರಜಾಪ್ರಭುತ್ವದ ಬಗ್ಗೆ ನಮಗೆ ನಂಬಿಕೆ ಇಲ್ಲ. ತಮಗೆ ಷರಿಯತ್ ಕಾನೂನೇ ಶ್ರೇಷ್ಠ. ಹಾಗಾಗಿ ನಾವು ಸಮಾಜವನ್ನು ಭಯಭೀತಿ ಸೃಷ್ಠಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸುತ್ತೇವೆ ಎಂದು ಮನಬಂದಂತೆ ವರ್ತಿಸಿರುವ ಇವರಿಗೆ ತಕ್ಕ ಶಿಕ್ಷೆ ನೀಡಬೇಕು. ಈ ನೆಲದ ಕಾನೂನು ಶ್ರೇಷ್ಠ. ಕಾನೂನಿಗಿಂಣತ ಯಾರೂ ದೊಡ್ಡವರಲ್ಲ ಎಂಬುದನ್ನು ಇವರಿಗೆ ಪೊಲೀಸರು ತೋರಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಹಠಾತ್ ಗಲಭೆಯ ಹಿಂದೆ ಎಸ್‌ಡಿಪಿಐ, ಪಿಎಫ್‌ಐ ಎಂಬ ದೇಶದ್ರೋಹಿ ಸಂಘಟನೆಗಳ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಕೂಡಲೇ ಈ ಸಂಘಟನೆಗಳನ್ನು ನಿಷೇಧಿಸಬೇಕು. ಎಸ್‌ಡಿಪಿಐ ಸಂಘಟನೆ ಅಧ್ಯಕ್ಷರ ಕೈವಾಡ ಗಲಭೆಗೆ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ವತಿಯಿಂದ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಬೇಕು. ಮಚ್ಚು, ಲಾಂಗು, ಪೆಟ್ರೋಲ್ ಬಾಂಬ್‌ನಂತಹ ಮಾರಕಾಸ್ತ್ರಗಳನ್ನು ಹಿಡಿದು ರಾಷ್ಟಸರಂತೆ ವರ್ತಿಸಿರುವ ಕ್ರಿಮಿಗಳಿಗೆ ತಕ್ಕಶಾಸ್ತಿ ಮಾಡಬೇಕೆಂದು ಆಗ್ರಹಿಸಿದರು.
ಈ ಗಲಭೆಗೆ ಕೆಲವು ಕಾಣದ ಕೈಗಳು ಕುಮ್ಮಕ್ಕು ನೀಡಿರುವ ಸಾಧ್ಯತೆಗಳು ಗೋಚರಿಸುತ್ತಿವೆ. ಹಾಗಾಗಿ ಈ ಘಟನೆಗೆ ಸಂಬಂಧಿಸಿದ ಪ್ರತಿಯೊಬ್ಬ ಆರೋಪಿಗಳನ್ನು ಸಮರ್ಪಕವಾಗಿ ತನಿಖೆಗೆ ಒಳಪಡಿಸಬೇಕು. ಈ ಪ್ರಚೋದನಾಕಾರಿ ಕೃತ್ಯಕ್ಕೆ ಹಣ ಒದಗಿಸಿರುವವರು. ಕುಮ್ಮಕ್ಕು ನೀಡಿದವರನ್ನು ಪತ್ತೆ ಮಾಡಬೇಕು. ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದವರಿಗೆ ಯಾವುದೇ ಪರಿಹಾರ ನೀಡಬಾರದು. ಗಲಭೆಯಿಂದ ನಷ್ಟವಾಗಿರುವ ಆಸ್ತಿಪಾಸ್ತಿ ಮೌಲ್ಯವನ್ನು ಗಲಭೆಕೋರರಿಂದಲೇ ವಸೂಲಿ ಮಾಡಬೇಕೆಂದು ಒತ್ತಾಯಿಸಿದರು.
ವಿಭಾಗ ಸಂಚಾಲಕ ಪ್ರಭಂಜನ್, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಬದ್ರಿನಾಥ್, ಜಿಲ್ಲಾ ಸಂಚಾಲಕ ಸಂದೀಪ್, ಜಿಲ್ಲಾ ಗೋರಕ್ಷ ಪ್ರಮುಖ ಪಿ.ರುದ್ರೇಶ್, ನಗರ ಅಧ್ಯಕ್ಷ ಶ್ರೀನಿವಾಸ್, ನಗರ ಸಂಚಾಲಕ ರಂಗಸ್ವಾಮಿ, ಪ್ರಮುಖರಾದ ವಿಠಲ್, ಶಶಿಧರ್, ಶ್ರೀನಿವಾಸ್, ರಂಗಸ್ವಾಮಿ, ಕೇಶವ್, ರೇಣು, ಕಾರ್ಯಕರ್ತರಾದ ಸಿದ್ದು, ಹೇಮಂತ್, ಜಯಂತ್, ಶೀಜು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss