Monday, July 4, 2022

Latest Posts

ಚಿತ್ರದುರ್ಗ| ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ: ಸಚಿವ ರಮೇಶ್ ಜಾರಕಿಹೊಳಿ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ತರಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಈಗ ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಯೋಜನೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಲ ಜಾರಕಿಹೊಳಿ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಟನಲ್ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಗೂಳಿಹೊಸಹಳ್ಳಿಯಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆ ವಿಭಾಗ ನಂ ೭ರ ಪ್ಯಾಕೇಜ್ – ೮ ಮತ್ತು ಪ್ಯಾಕೇಜ್ – ೯ರ ಕಾಮಗಾರಿ ಪ್ರಗತಿಯ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾದರೆ ಕೇಂದ್ರದಿಂದ ಅನುದಾನ ಬರಲಿದೆ. ಕಾಮಗಾರಿಯ ವೇಗ ಇನ್ನಷ್ಟು ಹೆಚ್ಚಲಿದೆ. ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳ್ಳಲು ಸಹಕಾರಿಯಾಗಲಿದೆ. ಜೊತೆಗೆ ಅಗತ್ಯ ಹಣಕಾಸಿನ ವ್ಯವಸ್ಥೆಯು ಆಗಲಿದೆ ಎಂದು ಹೇಳಿದರು.
೨೦೦೮ ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿತ್ತು. ಮೊದಲು ಇದು ೦೬ ಸಾವಿರ ಕೋಟಿ ಯೋಜನೆಯಾಗಿತ್ತು. ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅರಣ್ಯ ಪ್ರದೇಶದ ಅಡೆಚಣೆಯಿಂದಾಗಿ ಕಾಮಗಾರಿ ವೇಗಕ್ಕೆ ತೊಂದರೆಯಾಗಿದೆ. ಇದು ೨೦೧೬ ರಲ್ಲಿ ಈ ಯೋಜನೆಯು ಮುಕ್ತಾಯವಾಗಬೇಕಿತ್ತು. ಕೆಲವೊಂದು ತಾಂತ್ರಿಕ ತೊಂದರೆಯಿಂದಾಗಿ ವಿಳಂಬವಾಗಿದೆ. ಇರುವ ಎಲ್ಲಾ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ವೇಗ ಹೆಚ್ಚಿಸಲಾಗಿದೆ ಎಂದರು.
ಪ್ಯಾಕೇಜ್ ೮, ೯ ರಲ್ಲಿ ೭.೫ ಕಿ.ಮೀ ಟನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದು ಮೂರು ಕಡೆಇದ್ದ್ದು, ಮುಕ್ತಾಯದ ಹಂತದಲ್ಲಿದೆ. ಇನ್ನೂ ೩೦೦ ಮೀಟರ್ ಮಾತ್ರ ಬಾಕಿ ಉಳಿದಿದೆ. ಅದನ್ನೂ ಜುಲೈ ೧೫ ರೊಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಗಡವು ನೀಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ ಜೂನ್ ತಿಂಗಳೊಳಗೆ ೪೮ ಕೆರೆಗಳಿಗೆ ನೀರು ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಆ ಮೂಲಕ ಎಲ್ಲಾ ರೈತರಿಗೂ ನೀರಾವರಿ ಒದಗಿಸಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಯಿಂದ ವಿವಿ ಸಾಗರಕ್ಕೆ ನೀರು :
ಬರದ ನಾಡು ಚಿತ್ರದುರ್ಗ ಜಿಲ್ಲೆಯ ಜಲದಾಹ ತೀರಿಸುವ ಉದ್ದೇಶದಿಂದಾಗಿ ಎತ್ತಿನಹೊಳೆ ಯೋಜನೆಯಿಂದ ನೀರು ಒದಗಿಸುವ ಸಂಕಲ್ಪ ಹೊಂದಲಾಗಿದೆ. ಈ ಕುರಿತು ಈಗಾಗಲೇ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಎತ್ತಿನಹೊಳೆ ಯೋಜನೆಯಿಂದಲೂ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಜಲಾಯಶಕ್ಕೆ ನೀರು ಸಿಗಲಿದೆ ಎಂದು ತಿಳಿಸಿದರು.
ಚಿತ್ರದುರ್ಗ ಶಾಖಾ ಕಾಲುವೆ :
ಚಿತ್ರದುರ್ಗ ಶಾಖಾ ಕಾಲುವೆಯು ಭದ್ರಾ ಮೇಲ್ದಂಡೆ ಯೋಜನೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದ್ದು, ಈ ಕಾಲುವೆಯು ಅಜ್ಜಂಪುರದ ಬಳಿಯ ಉದ್ದೇಶಿತ ಸುರಂಗ ಮಾರ್ಗದ ನಂತರ ಪ್ರಾರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ತರೀಕೆರೆ ತಾಲ್ಲೂಕುಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಮತ್ತು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮುಖಾಂತರ ಅಂದಾಜು ೧೩೫.೦೦ ಕಿ.ಮೀ ದೂರ ಹಾದು ಹೋಗಿದ್ದು, ಸುಮಾರು ೧,೨೫,೪೬೫ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ್ದು, ಚಿತ್ರದುರ್ಗ ಜಿಲ್ಲೆಯ ಈಗಾಗಲೇ ಅಸ್ಥಿತ್ವದಲ್ಲಿರುವ ಅಚ್ಚುಕಟ್ಟು ಪ್ರದೇಶದ ೩೭ ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ ಎಂದರು.
ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮೀ ೬೧.೨೩೦ ರಿಂದ ೯೦.೦೦೦ ವರೆಗೆ ಪಂಕ್ತಿಕರಣಕ್ಕೆ ಅನುಮೋದನೆ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ವಿಭಾಗದ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮೀ ೬೧.೨೩೦ ರಿಂದ ೬೭.೨೩೦ ರಿಂದ ೬೭.೪೧೬ ಕಿ.ಮೀ ವರೆಗೆ ದೊಡ್ಡಕಿಟ್ಟದಹಳ್ಳಿ, ಕೆಂಚೇನಹಳ್ಳಿ, ನಾಕೀಕೆರೆ ಗ್ರಾಮಗಳ ಮೂಲಕ ಕಿ.ಮೀ ೬೭.೪೧೯ ರಿಂದ ೭೩.೩ದ೭೫ ವರೆಗೆ ಬೂದಿಪುರ, ಮಾಳಗೇರನಹಳ್ಳಿ, ಗೂಳಿಹೊಸಹಳ್ಳಿ, ಶಂಕರನಹಳ್ಳಿ, ಕಿ.ಮೀ ೭೩.೩೭೫ ರಿಂದ ೮೧.ದದ೮೨೦ ಕಿ.ಮೀ ವರೆಗೆ ಲಕ್ಕಿಹಳ್ಳಿ ಕಾಯ್ದಿರಿಸಿದ ಅರಣ್ಯ ಪ್ರದೇಶ ಹಾಗೂ ಹಿರಿಯೂರು ತಾಲ್ಲೂಕಿನ ಕಿ.ಮೀ ೮೧.೯೨೦ ರಿಂದ ೯೦.೦೦ ಕಿ.ಮೀ ವರೆಗೆ ಗೋಗುದ್ದು, ಕೊಳಾಳು ಮತ್ತು ಭರಂಪುರ ಗ್ರಾಮಗಳ ಜಮೀನುಗಳಲ್ಲಿ ಕಾಲುವೆಯು ಹಾದು ಹೋಗುತ್ತದೆ ಎಂದು ಹೇಳಿದರು.
ಪ್ಯಾಕೇಜ್ – ೯ : ಪ್ಯಾಕೇಜ್ – ೯ ರಡಿ ಚಿತ್ರದುರ್ಗ ಶಾಖಾ ಕಾಲುವೆ ಕಿ.ಮೀ. ೭೩ ರಿಂದ ೯೦ ರವರೆಗೆ ಇದ್ದು, ಇದರ ಟೆಂಡರ್ ಮೊತ್ತ ೩೬೮.೮೧ ಕೋಟಿಗಳಾಗಿದೆ. ಈಗಾಗಲೇ ೨೭೯.೬೦ ಕೋಟಿ ವೆಚ್ಚ ಮಾಡಿದ್ದು, ೧೪೬.೦೧ ಕೋಟಿಯಷ್ಟು ಬಾಕಿ ಇದೆ. ಇದರಡಿ ಮೂರು ಟನಲ್‌ಗಳು ಹಾಗೂ ತೆರೆದ ಕಾಲುವೆ ಬರಲಿದ್ದು, ಟನಲ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹಾಗೂ ವಿಶ್ವೇಶ್ವರಯ್ಯ ಜಲ ನಿಮಗದ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್‌ರಾವ್ ಪೇಶ್ವೆ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರಾಘವನ್, ಅಧೀಕ್ಷಕ ಇಂಜಿನಿಯರ್ ವೇಣುಗೋಪಾಲ್, ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಹಾಸ್, ಶ್ರೀಧರ್, ಟಾಟಾ ಶಿವನ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss