ಚಿತ್ರದುರ್ಗ: ಕೊರೋನಾದಿಂದಾಗಿ ಕಳೆದ ೨ ತಿಂಗಳಿಂದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದ್ದ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಮುರುಘಾವನಕ್ಕೆ ಸೋಮವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಶ್ರೀಮಠದಲ್ಲಿ ಭಾನುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೦ನೇ ಇಸವಿಯು ಅನಾರೋಗ್ಯಕರವಾದ ಸಂದರ್ಭವನ್ನು ಎದುರಿಸುತ್ತಿದ್ದು, ಅನೇಕ ತಲ್ಲಣಗಳು, ಕಂಡರಿಯದ ದುಸ್ಥಿತಿ, ಅಸಹಾಯಕ ಪರಿಸ್ಥಿತಿ ಉಂಟಾಗಿದೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಸುಮಾರು ೭೦ ದಿನಗಳು ಕಳೆದಿವೆ ಪ್ರಧಾನಮಂತ್ರಿ ನರೇಂದ್ರಮೋದಿಯವರು ಲಾಕ್ಡೌನ್ ಮಾಡಿದ್ದಾರೆ. ಈಗ ೫ನೇ ಲಾಕ್ಡೌನ್. ಆರ್ಥಿಕ ವ್ಯವಸ್ಥೆಯ ಮೇಲೆ ಉಂಟಾಗಿರುವ ದುಷ್ಪರಿಣಾಮಗಳಿಂದ ಹಲವಾರು ಉತ್ಪಾದನಾ ವಲಯಗಳು ಕೈಗಾರಿಕೆಗಳು ನಿಂತುಹೋಗಿವೆ. ಲಾಕ್ಡೌನ್ನಿಂದ ರಾಜ್ಯಸರ್ಕಾರ ಒಂದಷ್ಟು ವಿನಾಯಿತಿಯನ್ನು ನೀಡುತ್ತಿದ್ದು, ಶ್ರೀಮಠದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಶ್ರೀಮಠಕ್ಕೆ ಮತ್ತು ಮುರುಘಾವನಕ್ಕೆ ಭೇಟಿ ನೀಡುವ ಸಾರ್ವಜನಿಕರು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಬಳಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್ – ೧೯ ಇರುವವರೆಗೆ ನಾವು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಅಂತರವನ್ನು ಮೀರಬಾರದು. ಮಾನವ ದನಕರುಗಳಿಗೆ ಮೂಗುದಾರ ಹಾಕಿದಂತೆ ಕೊರೋನಾ ಮಾನವನಿಗೆ ಮೂಗುದಾರ ಹಾಕಿದೆ. ಒಂದೆರೆಡು ದಿನ ನೋಡಿಕೊಂಡು ನಿತ್ಯದಾಸೋಹ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.