Tuesday, June 28, 2022

Latest Posts

ಚಿತ್ರದುರ್ಗ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಹದಿನೆಂಟು ಮೆಟ್ಟಿಲು ಹತ್ತಲು ಅವಕಾಶ

ಹೊಸ ದಿಗಂತ ವರದಿ, ಚಿತ್ರದುರ್ಗ:

ಇಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಾಲಾಧಾರಿಗಳಿಗೆ ಈ ಬಾರಿ ನ.16 ರಿಂದ ಜ.15ರವರೆಗೆ ಹದಿನೆಂಟು ಮೆಟ್ಟಿಲು ಹತ್ತಲು ಅವಕಾಶ ಕಲ್ಪಿಸಲಾಗಿದೆ. ಶಬರಿಮಲೆಗೆ ತೆರಳುವ ಭಕ್ತರಿಗೆ ಹೆಸರು ನೊಂದಣಿ ಹಾಗೂ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಅಲ್ಲದೇ ಪ್ರತಿದಿನ ನಿಗದಿತ ಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ. ಹಾಗಾಗಿ ಆಯಾ ರಾಜ್ಯಗಳಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನಗಳಲ್ಲೇ ಹದಿನೆಂಟು ಮೆಟ್ಟಿಲು ಹತ್ತಿ, ಇರುಮುಡಿ ಸಮರ್ಪಿಸಿ, ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹದಿನೆಂಟು ಮೆಟ್ಟಿಲು ಹೊಂದಿರುವ ರಾಜ್ಯದ ಆರೇಳು ದೇವಸ್ಥಾನಗಳ ಪೈಕಿ ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇವಸ್ಥಾನವೂ ಒಂದು. ಮೆದೇಹಳ್ಳಿ ರಸ್ತೆಯಲ್ಲಿ ನಿರ್ಮಿಸಿರುವ ದೇವಸ್ಥಾನಕ್ಕೆ ಈಗ 21 ವರ್ಷಗಳು ಕಳೆದಿವೆ. ಮದಕರಿ ನಾಯಕರ ಕಾಲದಲ್ಲಿ ಪ್ರತಿಷ್ಠಾಪನೆಯಾದ ಇಲ್ಲಿನ ಭೀಮಾಶಂಕರ ಮತ್ತು ಭೀಮಾಂಜನೇಯ ದೇವಸ್ಥಾನದಲ್ಲಿ ಅಯ್ಯಪ್ಪನ ಪೂಜೆ ನಡೆಯುತ್ತಿತ್ತು. ಇಲ್ಲಿ ನೆಲೆಸಿದ್ದ ಶ್ರೀರಾಮತೀರ್ಥರ ಸ್ವಾಮಿಗಳು ಅಯ್ಯಪ್ಪನ ದೇಗುಲಕ್ಕೆ ಜಾಗ ನೀಡಿದ್ದರು. ಶಬರಿಮಲೆಗೆ ಹೋಗಲಾಗದವರಿಗೆ ಅದೇ ಮಾದರಿಯಲ್ಲಿ ದೇವಸ್ಥಾನ ನಿರ್ಮಿಸಬೇಕೆಂಬ ಚಿಂತನೆ ಮೂಡಿತ್ತು.
1999 ರಲ್ಲಿ ಶಬರಿಮಲೆ ಮಾದರಿಯಲ್ಲೇ ದೇವಾಲಯ ನಿರ್ಮಿಸಲಾಯಿತು. ಕೇರಳದ ತಪತಿ ಮರಿಮಳಾಚಾರ್ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮುರುಘಾಮಠದ ಅಂದಿನ ಮಲ್ಲಿಕಾರ್ಜುನ ಸ್ವಾಮೀಜಿ, ವಿರುಪಾಕ್ಷಪ್ಪ ಹಾಗೂ ಭಕ್ತರ ಸಹಕಾರದಿಂದ ಕಲ್ಲಿನ ಕಟ್ಟಡ ನಿರ್ಮಿಸಲಾಯಿತು. ದೇವಸ್ಥಾನದ ಆವರಣದಲ್ಲಿ ಶ್ರೀ ಭೀಮಶಂಕರ ಮತ್ತು ಭೀಮಾಂಜನೇಯ, ವಿಷ್ಣು ಹಾಗೂ ನವಗ್ರಹ ದೇವಾಲಯಗಳಿವೆ. ಮೇಲ್ಬಾಗದ ಮಧ್ಯದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ನೆಲೆಗೊಂಡಿದ್ದು, ಅಕ್ಕಪಕ್ಕದಲ್ಲಿ ಗಣಪತಿ, ಸುಬ್ರಹ್ಮಣ್ಯ ದೇಗುಲಗಳಿವೆ.
ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಮೂಲಕ ದೇವಸ್ಥಾನ ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ. ನ.16 ರಿಂದ ಜ.15 ರವರೆಗೆ ಮಾಲಾಧಾರಿ ಸ್ವಾಮಿಗಳಿಗೆ ಪ್ರತಿದಿನ ಉಚಿತ ಅನ್ನದಾನ ನೆರವೇರಿಸಲಾಗುತ್ತಿದೆ. ದೇವಸ್ಥಾನ ಪ್ರತಿಷ್ಠಾಪನೆಯಾದ ಮರು ವರ್ಷದಿಂದ ಮಾಲಾಧಾರಿಗಳಿಗೆ ಉಚಿತ ಅನ್ನದಾನ ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷದಿಂದ ಪ್ರತಿದಿನ ಗಣಹೋಮ, ಅಭಿಷೇಕ ನಡೆಸಲಾಗುತ್ತಿದೆ. ಮಕರ ಜ್ಯೋತಿಯಂದು ಒಂದು ಲಕ್ಷ ದೀಪೋತ್ಸವ ನಡೆಸಲಾಗುತ್ತದೆ.
ಈ ಬಾರಿ ಕೋವಿಡ್ ಕಾರಣದಿಂದ ಭುವನಂ ಸನ್ನಿಧಾನಂ (ಮನೆಯೇ ಮಂತ್ರಾಲಯ) ಎಂಬ ಘೋಷವಾಕ್ಯದಂತೆ ಮನೆಯಲ್ಲೇ ವ್ರತ ಆಚರಿಸಿ, ಸಮೀಪದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಹೋಗಿ ಇರುಮುಡಿ ಸಮರ್ಪಿಸಿ, ದೇವರ ದರ್ಶನ ಮಾಡುವಂತೆ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಪದಾಕಾರಿಗಳು ತೀರ್ಮಾನಿಸಿದ್ದಾರೆ. ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಭಕ್ತರು ಸಹ ಇದನ್ನು ಪಾಲಿಸಬೇಕು ಎಂದು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್ ಕುಮಾರ್ ಮನವಿ ಮಾಡಿದ್ದಾರೆ.
ಡಿ.15 ರಿಂದ 20 ರವರೆಗೆ 21ನೇ ವರ್ಷದ ಬ್ರಹ್ಮೋತ್ಸವ. ಡಿ.19ರ ಸಂಜೆ 7ಕ್ಕೆ ಅಯ್ಯಪ್ಪಸ್ವಾಮಿ ಪಡಿಪೂಜೆ. ಡಿ.20ರ ಮಧ್ಯಾಹ್ನ 12ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ಮಹಾ ಅನ್ನದಾನ. ಜ.13ರ ಸಂಜೆ 5.30ಕ್ಕೆ ಅಯ್ಯಪ್ಪಸ್ವಾಮಿಯ ಆಭರಣ ಮೆರವಣಿಗೆ. ಜ.14ರ ಸಂಜೆ 5.30ಕ್ಕೆ ಮಕರ ಸಂಕ್ರಮಣದ ಪ್ರಯುಕ್ತ ಸ್ವಾಮಿಯ ಸನ್ನಿಧಾನದಲ್ಲಿ ವಿಶೇಷ ದೀಪೋತ್ಸವ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss