ಚಿತ್ರದುರ್ಗ: ಲೋಕೋಪಯೋಗಿ ಇಲಾಖೆಯ ವತಿಯಿಂದ ನಗರದಲ್ಲಿ ೨.೫ ಕೋಟಿ ರೂ. ವೆಚ್ಚದ ಅನುದಾನದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೋಮವಾರ ಚಾಲನೆ ನೀಡಿದರು.
ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಪಕ್ಕದಲ್ಲಿ ಶಿಲ್ಪಭವನದ ಕಾಂಪೌಂಡ್ ನಿರ್ಮಾಣ ಕಾಮಗಾರಿ ಹಾಗೂ ನೂತನ ಲೋಕೋಪಯೋಗಿ ಕಚೇರಿಯ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ಕಚೇರಿ ತುಂಬಾ ಹಳೆಯದಾಗಿದ್ದು, ಉತ್ತಮ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಉದ್ದೇಶವಿದೆ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕಚೇರಿ ಕಾಂಪೌಂಡನ್ನು ತೆರವುಗೊಳಿಸಲಾಗಿತ್ತು ಎಂದರು.
ಈಗ ಈ ಎರಡು ಕಾಮಗಾರಿಗಳಿಗೆ ಸುಮಾರು ೨.೫ ಕೋಟಿ ರೂ. ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗುವುದು. ಲೋಕೋಪಯೋಗಿ ಕಚೇರಿಯ ಕಾಂಪೌಂಡ್ನಲ್ಲಿ ಹೆಚ್ಚು ನೆರಳು ಕೊಡುವ ಗಿಡಗಳನ್ನು ಹಾಕಬೇಕು ಎಂದು ಇಲಾಖೆಯ ಇಂಜಿನಿಯರ್ಗಳಿಗೆ ಸೂಚನೆ ನೀಡಿದರು.
ಸುಮಾರು ೩೦೦ ರಿಂದ ೪೦೦ ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ೨೦೨೧ ಮಾರ್ಚ್ನೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆಯ ೧೪ನೇ ಹಣಕಾಸಿನ ಯೋಜನೆಯಡಿ ನಗರದ ಕನಕವೃತ್ತ, ಅಂಬೇಡ್ಕರ್ ವೃತ್ತ, ಮದಕರಿನಾಯಕ ವೃತ್ತ ಹಾಗೂ ಒನಕೆ ಓಬವ್ವ ವೃತ್ತಗಳಲ್ಲಿ ಹಾಗೂ ವಿವಿಧ ಉದ್ಯಾನವನಗಳಲ್ಲಿ ನೀರಿನ ಸಂಗೀತ ಕಾರಂಜಿ ಮಾಡಲು ಈಗಾಗಲೇ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಟೆಂಡರ್ನ್ನು ಕರೆದು ಕೆಲಸ ಪ್ರಾರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಸತೀಶ್, ಚಂದ್ರಪ್ಪ, ಗೋಪಾಲಪ್ಪ, ಕೃಷ್ಣಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.