Friday, July 1, 2022

Latest Posts

ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆ ಪ್ರಮಾಣ 5 ವರ್ಷಗಳಲ್ಲೇ ಕನಿಷ್ಠಕ್ಕೆ!

ಹೊಸದಿಲ್ಲಿ: ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕರೆ ಎಲ್ಲೆಡೆ ಅನುರಣಿಸುತ್ತಿರುವಾಗಲೇ ಚೀನಾದೊಂದಿಗಿನ ಭಾರತದ ವ್ಯಾಪಾರ ವಹಿವಾಟಿನ ಕೊರತೆ ಮಟ್ಟವು ಕಳೆದ ಹಣಕಾಸು ವರ್ಷದಲ್ಲಿ ೪೮.೭ಬಿ.ಡಾ.ಗಿಳಿದಿದೆ. ಇದು ಕಳೆದ ೫ವರ್ಷಗಳಲ್ಲೇ ಅತಿ ಕನಿಷ್ಠವೆನಿಸಿದೆ.ಕಳೆದ ಒಂದು ವರ್ಷದ ಹಿಂದೆ ಈ ವ್ಯಾಪಾರ ಕೊರತೆ (ಚೀನಾದಿಂದ ಭಾರತಕ್ಕೆ ಆಮದು ಹೆಚ್ಚಿ ಚೀನಾಕ್ಕೆ ಭಾರತೀಯ ರಫ್ತು ಪ್ರಮಾಣ ಕಡಿಮೆಯಿದ್ದು ಇದರ ನಡುವೆ ಅಂತರ ಹೆಚ್ಚಿರುವುದು)೫೩.೬ಬಿ.ಡಾ.ಗಳಾಗಿತ್ತು. ೨೦೧೯-೨೦ರಲ್ಲಿ ಗಡಿಯಾಚೆಯಿಂದ ಮಾಡಿಕೊಳ್ಳಲಾಗುತ್ತಿದ್ದ ಆಮದು ಶೇ.೭ರಷ್ಟು ಇಳಿಕೆಯಾಗಿ ೬೫ಬಿ.ಡಾ.ಗಿಳಿದಿದೆ.ಚೀನೀ ವಸ್ತುಗಳನ್ನು ಬಹಿಷ್ಕರಿಸುವುದು ಹೇಳಿದಷ್ಟು ಸುಲಭವಲ್ಲ ಎಂಬ ಕುಹಕಗಳ ನಡುವೆಯೇ ಈ ಇಳಿಕೆ ದಾಖಲಾಗಿರುವುದು ಗಮನ ಸೆಳೆದಿದೆ.
ವಿಶೇಷವಾಗಿ ಗಮನಿಸಬೇಕಾಗಿರುವುದೆಂದರೆ ,ಕಳೆದ ವರ್ಷದ ಈ ವ್ಯಾಪಾರ ಕೊರತೆ ಪ್ರಮಾಣವು ೨೦೧೪-೧೫ರಲ್ಲಿದ್ದಂತಹ ಮಟ್ಟಕ್ಕೆ ಸಮನಾಗಿದೆ.ಇದೀಗ ಭಾರತ ಸರಕಾರ ಸೇರಿದಂತೆ ಭಾರತೀಯರು ಒಟ್ಟಾಗಿ ಚೀನೀ ಆಮದನ್ನು ತಗ್ಗಿಸಲು ಮತ್ತು ಚೀನೀ ಅವಲಂಬನೆಯನ್ನು ಕಡಿಮೆ ಮಾಡಲು ಸಜ್ಜಾಗಿರುವುದರಿಂದ ಈ ವರ್ಷ ಇದು ಇನ್ನಷ್ಟು ತಗ್ಗುವ ವಿಶ್ವಾಸವಿದೆ.ಕಳೆದ ಕೆಲವು ತಿಂಗಳುಗಳಲ್ಲಿ ಭಾರತದ ಕಾರ್ಯತಂತ್ರ ಭಾರೀ ಫಲ ನೀಡಿದ್ದು, ಇದು ಭಾರತದ ವ್ಯಾಪಾರ ಕೊರತೆ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡಲು ನೆರವಾಗಲಿದೆ ಎಂದು ಮೂಲಗಳು ಹೇಳಿವೆ.
ಚೀನಾದೊಂದಿಗಿನ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್‌ಇಸಿಇಪಿ) ಒಪ್ಪಂದ ಭಾರತ ಮತ್ತು ಚೀನಾ ನಡುವೆ ಬೃಹತ್ ವ್ಯಾಪಾರ ಸಂಬಂಧವನ್ನು ಕಲ್ಪಿಸಿತ್ತು. ಇದರಿಂದ ಭಾರತದಿಂದ ಚೀನಾಕ್ಕೆ ರಫ್ತು ಪ್ರಮಾಣದಲ್ಲೂ ಗಣನೀಯ ಹೆಚ್ಚಳ ಉಂಟಾಗಿತ್ತು.ಆದರೆ ಅನಂತರ ಚೀನಾ ಭಾರತದ ವಿರುದ್ಧ ನಡೆಸುತ್ತಿರುವ ಕುಟಿಲ ಕಾರಸ್ಥಾನದ ಹಿನ್ನೆಲೆಯಲ್ಲಿ ಮೋದಿ ಸರಕಾರ ಚೀನಾ ಆಮದನ್ನು ತಗ್ಗಿಸಲು ವಿವಿಧ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.ಈ ಮೂಲಕ ಚೀನಾ ತನ್ನ ಉತ್ಪನ್ನಗಳನ್ನು ಭಾರತದಲ್ಲಿ ಡಂಪ್ ಮಾಡುವುದನ್ನು ತಪ್ಪಿಸಿ ಭಾರತೀಯ ಉದ್ಯಮಗಳನ್ನು ರಕ್ಷಿಸಲು ನೆರವಾಗಲಿದೆ.
ಚೀನಾದ ಆಮದನ್ನು ತಗ್ಗಿಸಿರುವುದು ಅತ್ತ ಅಮೆರಿಕಕ್ಕೆ ಭಾರತದೊಂದಿಗೆ ತನ್ನ ವ್ಯಾಪಾರ ಪಾಲುದಾರಿಕೆಯನ್ನು ಹೆಚ್ಚಿಸಲು ದಾರಿ ಮಾಡಿಕೊಟ್ಟಿದೆ. ಇದೀಗ ಅಮೆರಿಕದೊಂದಿಗೆ ಭಾರತದ ವ್ಯಾಪಾರ ವಹಿವಾಟು ಮೊತ್ತ ೮೮.೮ಬಿ.ಡಾ.ಆಗಿದ್ದರೆ ಚೀನಾದೊಂದಿಗಿನ ವ್ಯಾಪಾರ ವಹಿವಾಟು ೮೨ಬಿ.ಡಾ.ಗಿಳಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss