Thursday, June 30, 2022

Latest Posts

ಚೀನಾದಿಂದ ಬಂದ 50,000 ಕಿಟ್ ಬಳಕೆಗೆ ಅಯೋಗ್ಯ: ವಾಪಸ್ ರವಾನೆಗೆ ಚಿಂತನೆ

ಹೊಸದಿಲ್ಲಿ: ಸ್ವಯಂರಕ್ಷಣಾ ಉಪಕರಣಗಳ (ಪಿಪಿಇ) ವಿಶ್ವದ ಅಗ್ರರಫ್ತು ರಾಷ್ಟ್ರ ಚೀನಾವು ಭಾರತಕ್ಕೆ ಕಳುಹಿಸಿದ್ದ ಪಿಪಿಇ ಕಿಟ್‌ಗಳ ಗುಣಮಟ್ಟ ಅತ್ಯಂತ ಕಳಪೆಯಾಗಿರುವ ಹಿನ್ನೆಲೆ, ಕಿಟ್‌ ಗಳನ್ನು ಚೀನಾಗೆ ವಾಪಸ್ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿರುವ ಡಿಆರ್‌ಡಿಒ ಲ್ಯಾಬ್‌ ನಲ್ಲಿ ಕಿಟ್‌ಗಳ ಪರೀಕ್ಷೆ ನಡೆಸಲಾಗಿದ್ದು, ಒಟ್ಟು 50,000 ಕಿಟ್ ಬಳಕೆಗೆ ಯೋಗ್ಯವಿಲ್ಲ ಎಂಬುದು ತಿಳಿದುಬಂದಿದೆ. ಏ.5 ರಂದು ಭಾರತಕ್ಕೆ ಒಟ್ಟು 1.7ಲಕ್ಷ ಪಿಪಿಇ ಕಿಟ್‌ಗಳು ಆಮದಾಗಿದ್ದವು. ಆದರೆ ಈ ಕಿಟ್‌ಗಳು ಬಳಕೆಗೆ ಸುರಕ್ಷಿತವೋ, ಯೋಗ್ಯವೋ ಎಂಬುದನ್ನು ತಿಳಿಯಲು ನಡೆಸಿದ್ದ ಪರೀಕ್ಷೆಯಲ್ಲಿ ಕಿಟ್‌ ಗಳ ಗುಣಮಟ್ಟ ಕಳಪೆ ಎಂದು ತಿಳಿದುಬಂದಿದೆ.

ಅಲ್ಲದೇ ಪರೀಕ್ಷೆಯಲ್ಲಿ ಬಳಕೆಗೆ ಯೋಗ್ಯವೇ ಅಲ್ಲ ಎಂದು ಸಾಬೀತಾಗಿರುವ 50 ಸಾವಿರ ಕಿಟ್‌ಗಳ ಪೈಕಿ ಕೆಲವೊಂದು ಚೀನಾ ಭಾರತಕ್ಕೆ ರಫ್ತು ಮಾಡಿರುವ ಕಿಟ್‌ಗಳಿದ್ದರೆ, ಕೆಲವು ಭಾರತದ ದೊಡ್ಡ ಉದ್ಯಮಗಳು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿರುವ ಕಿಟ್‌ಗಳೂ ಸೇರಿವೆ ಎಂದು ತಿಳಿದುಬಂದಿದೆ.

ಭಾರತ ಸದ್ಯ ಕೇವಲ ಸಿಇ/ಎಫ್‌ಡಿಎ ಪ್ರಮಾಣಪತ್ರದ ಮಾನ್ಯತೆ ಇರುವ ಕಿಟ್‌ಗಳನ್ನು ಮಾತ್ರವೇ ಸ್ವೀಕರಿಸುತ್ತಿದೆ. ಆದರೆ ಯಾವ ಕಿಟ್‌ಗಳು ಸಿಇ/ಎಫ್‌ಡಿಎ ಮಾನ್ಯತೆ ಹೊಂದಿರುವುದಿಲ್ಲವೋ, ಅವುಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇನ್ನು ಈ ಹಿಂದೆ ಚೀನಾ ಕಳಪೆ ಗುಣಮಟ್ಟದ ತಪಾಸಣಾ ಕಿಟ್ ಕಳುಹಿಸಿರುವುದಾಗಿ ಯೂರೋಪ್ ಸೇರಿ ಹಲವು ರಾಷ್ಟ್ರಗಳು ಕೂಡ ಕಿಟ್‌ಗಳನ್ನು ಚೀನಾಗೆ ಹಿಂದಿರುಗಿಸಿದ್ದವು. ಇನ್ನು ಈ ಬೆನ್ನಲ್ಲೇ, ಭಾರತ ಸಿಂಗಾಪುರ ಮೂಲದ ಸಂಸ್ಥೆಯಿಂದ ಹೆಚ್ಚುವರಿ 1 ದಶಲಕ್ಷ ಕಿಟ್‌ಗಳನ್ನು ಆಮದುಮಾಡಿಕೊಳ್ಳುತ್ತಿದೆ. ಮೇ ಮೊದಲ ವಾರದಲ್ಲಿ ಎಲ್ಲ ಕಿಟ್‌ಗಳು ಭಾರತದ ಕೈ ಸೇರಲಿದ್ದು, ಇನ್ನಷ್ಟು ಕಿಟ್‌ಗಳ ಪೂರೈಕೆಗೆ ಸರ್ಕಾರ ಗುತ್ತಿಗೆ ನೀಡಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಭಾರತ ತಲುಪಿದ 6.5 ಲಕ್ಷ ತಪಾಸಣಾ ಕಿಟ್: ಇನ್ನು ಭಾರತ ಗುರುವಾರ ಚೀನಾದಿಂದ ಸುಮಾರು 6.5 ಲಕ್ಷ ಕೊರೋನಾ ತಪಾಸಣಾ ಕಿಟ್‌ಗಳನ್ನು ಸ್ವೀಕರಿಸಿರುವುದಾಗಿ ಮಾಹಿತಿ ದೊರೆತಿದೆ. ಅಲ್ಲದೆ ದಕ್ಷಿಣ ಕೊರಿಯಾ, ಫ್ರಾನ್ಸ್ ಮತ್ತು ಕೆನಡಾದಿಂದ ಸ್ವಯಂ ರಕ್ಷಣಾ ಕಿಟ್ ಹಾಗೂ ಇತರೆ ವೈದ್ಯಕೀಯ ಉಪಕರಣಗಳ ಪೂರೈಕೆಯನ್ನು ನಿರೀಕ್ಷಿಸುತ್ತಿದೆ ಎಂದೂ ತಿಳಿದುಬಂದಿದೆ. ಚೀನಾ ಕಳುಹಿಸಿದ್ದ ಪಿಪಿಇ ಕಿಟ್‌ಗಳ ಗುಣಮಟ್ಟ ಕಳಪೆಯಾಗಿರುವ ಹಿನ್ನೆಲೆ, ತಪಾಸಣಾ ಕಿಟ್‌ಗಳನ್ನು ವಿಶೇಷವಾಗಿ ಎರಡು ಕಾರ್ಗೋ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗಿದೆ. ಜತೆಗೆ ಉಪಕರಣ ಗುಣಮಟ್ಟ ಕಾಯ್ದಿರಿಸಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಚೀನಾ ಹೇಳಿದೆ.

ಚೀನಾ ಕಚ್ಚಾ ವಸ್ತುವಿನಲ್ಲಿ ಸೋಂಕಿಲ್ಲ: ಮೈಸೂರಿನ ಜುಬಿಲಿಯಂಟ್ ಔಷಧ ಕಾರ್ಖಾನೆಗೆ ಮಾರ್ಚ್ ತಿಂಗಳಲ್ಲಿ ಚೀನಾದಿಂದ ಆಮದು ಮಾಡಿಕೊಂಡಿದ್ದ ಕಚ್ಚಾ ವಸ್ತುವಿನಲ್ಲಿ ಯಾವುದೇ ಕೊರೋನಾ ಸೋಂಕು ಇರಲಿಲ್ಲ ಎಂಬುದು ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss