ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತದ ಜಾಗವನ್ನು ಚೀನಾಗೆ ಬಿಟ್ಟುಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯೊಬ್ಬ ಹೇಡಿ, ಚೀನಾವನ್ನು ಎದುರಿಸು ಧೈರ್ಯ, ತಾಕತ್ತು ಅವರಿಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಮೋದಿ ಅವರು ಚೀನಾದ ಎದುರು ತಲೆ ಬಗ್ಗಿಸಿದ್ದಾರೆ. 2020ರ ಏಪ್ರಿಲ್ನಲ್ಲಿ ಗಡಿಯಲ್ಲಿ ಉದ್ರಿಕ್ತ ವಾತಾವರಣವಿತ್ತು. ನಮ್ಮ ಭಾರತೀಯ ಸೇನಾ ಪಡೆಗಳು ಫಿಂಗರ್ 4 ಹಂತದವರೆಗೂ ಜಮಾವಣೆಗೊಂಡಿದ್ದವು. ಈಗ ಸೇನೆಯನ್ನು ಫಿಂಗರ್ 3 ಹಂತಕ್ಕೆ ಹಿಂಪಡೆಯಲಾಗಿದೆ. ಈ ಮೂಲಕ ಭಾರತದ ಜಾಗವನ್ನುಚೀನಾಗೆ ಬಿಟ್ಟುಕೊಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ನಮ್ಮ ಸೇನಾಪಡೆ ಕಷ್ಟಪಟ್ಟು ಕೈಲಾಶ್ ವಲಯವನ್ನು ವಶಪಡಿಸಿಕೊಂಡಿದೆ. ಅಲ್ಲಿಂದ ಹಿಂದೆ ಸರಿಯುವಂತೆ ಸೇನೆಗೆ ಏಕೆ ಹೇಳಲಾಗುತ್ತಿದೆ. ಕೈಲಾಶ ವಲಯವನ್ನು ಹಿಂಪಡೆದಿದ್ದಕ್ಕೆ ಭಾರತಕ್ಕೆ ಸಿಕ್ಕಿರುವುದಾದರೂ ಏನು? ಅತ್ಯಂತ ಕಾರ್ಯತಂತ್ರ ಹೊಂದಿರುವ ಸ್ಥಳವಾದ ಡೆಪ್ಸಂಗ್ ಪ್ರಸ್ಥಭೂಮಿಯಿಂದ ಚೀನಾದ ಸೇನಾಪಡೆ ಹಿಂದೆ ಸರಿದಿಲ್ಲವೇಕೆ? ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್ ಪ್ರದೇಶಗಳಿಂದಲೂ ಚೀನಾ ತನ್ನ ಸೇನೆಯನ್ನು ಹಿಂದೆ ಪಡೆದುಕೊಂಡಿಲ್ಲ ಎಂದು ಪ್ರಶ್ನೆ ಮಾಡಿದರು.