ಕುಶಾಲನಗರ: ಭಾರತೀಯ ಯೋಧರ ಮೇಲೆ ಚೀನಾ ನಡೆಸಿದ ದಾಳಿಯನ್ನು ಖಂಡಿಸಿ ಯುವ ಕಾಂಗ್ರೆಸ್ ಘಟಕದಿಂದ ಕುಶಾಲನಗರದಲ್ಲಿ ಪ್ರತಿಭಟಿಸಲಾಯಿತು. ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿ ಚೀನಾ ವಿರುದ್ಧ ಘೋಷಣೆಗಳನ್ನು ಕೂಗಿದರು.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಜಯಕಾರ ಮೊಳಗಿಸಿದರು. ಚೀನಾ ದೇಶದ ಉತ್ಪನ್ನಗಳನ್ನು ಭಾರತೀಯರು ಧಿಕ್ಕರಿಸುವಂತೆ ಘೋಷಣೆಗಳನ್ನು ಕೂಗಲಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್, ಭಾರತ-ಚೀನಾ ಗಡಿಯಲ್ಲಿ ಕಳೆದ ಒಂದು ತಿಂಗಳಿನಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದನ್ನು ಶಮಗೊಳಿಸಲು ರಾಜತಾಂತ್ರಿಕ ಮಾತುಕತೆಗಳು ನಡೆಯದ ಕಾರಣ ಭಾರತೀಯ ಯೋಧರು ಪ್ರಾಣತ್ಯಾಗ ಮಾಡುವ ಪರಿಸ್ಥಿತಿ ಒದಗಿತು ಎಂದು ಆರೋಪಿಸಿದರು.
ಚೀನಾ ದೇಶ ಉತ್ಪನ್ನಗಳನ್ನು ತ್ಯಜಿಸುವುದು ಕೇವಲ ಭಾರತೀಯ ಪ್ರಜೆಗಳ ಕರ್ತವ್ಯ ಮಾತ್ರವಲ್ಲ. ಚೀನಾದೊಂದಿಗೆ ಆರ್ಥಿಕ ವ್ಯವಹಾರಗಳನ್ನು ಭಾರತ ಸರಕಾರ ಮೊಟಕುಗೊಳಿಸಿ ಭಾರತವನ್ನು ಸ್ವಾವಲಂಬಿಗೊಳಿಸಲು ತನ್ನ ಜವಾಬ್ದಾರಿ ಪ್ರದರ್ಶಿಸಬೇಕಿದೆ ಎಂದರು.
ಮಡಿಕೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ ಮಾತನಾಡಿ, ಬಿಜೆಪಿ ಕಾರ್ಯಕರ್ತರು ನಿಜವಾದ ದೇಶಭಕ್ತರಾಗಿದ್ದಲ್ಲಿ ಯೋಧರ ಸಾವಿಗೆ ನ್ಯಾಯ ಒದಗಿಸಬೇಕಾದರೆ ಪ್ರಧಾನಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ನೈತಿಕತೆ ಮೆರೆಯಲಿ ಎಂದು ಸವಾಲು ಹಾಕಿದರು.
ಈ ಸಂದರ್ಭ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶಿವಶಂಕರ್, ಕಾರ್ಯದರ್ಶಿ ಶಿವಕುಮಾರ್, ಕುಶಾಲನಗರ ಅಧ್ಯಕ್ಷ ಪುನೀತ್, ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಕೂಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಎಸ್.ಎನ್.ನರಸಿಂಹಮೂರ್ತಿ, ಕುಶಾಲನಗರ ಪ.ಪಂ. ಸದಸ್ಯರಾದ ಶೇಖ್ ಖಲೀಮುಲ್ಲಾ, ಪ್ರಮೋದ್ ಮುತ್ತಪ್ಪ ಮತ್ತಿತರರು ಇದ್ದರು.