ವಾಷಿಂಗ್ಟನ್: ಚೀನಾ ವಿರುದ್ದದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಟ್ಟು ಇನ್ನೂ ತಣಿದಿಲ್ಲ…
ಕೊರೋನಾ ವೈರಸ್ ನ್ನು ‘ಕುಂಗ್ ಫ್ಲೂ’ ಎಂದು ಕರೆದಿರುವ ಟ್ರಂಪ್, ಇದರ ಹರಡುವಿಕೆಗೆ ಚೀನಾವೇ ಕಾರಣ ಎಂದು ಮತ್ತೆ ಕಿಡಿಕಾರಿದ್ದಾರೆ. ಕೊರೋನಾ ಜಗತ್ತಿನಾದ್ಯಂತ ನಾಲ್ಕೂವರೆ ಲಕ್ಷ ಜನರನ್ನು ಬಲಿ ಪಡೆದಿದೆ. ಸುಮಾರು 8.5 ಮಿಲಿಯನ್ ಗೂ ಹೆಚ್ಚು ಜನರು ಕೊರೋನಾದಿಂದ ಬಳಲುತ್ತಿದ್ದಾರೆ. ಇದು ‘ಕುಂಗ್ ಫ್ಲೂ’ ಎಂದು ಟ್ರಂಪ್ ‘ಬಣ್ಣಿಸಿದ್ದಾರೆ’.
ಒಕ್ಲಹೋಮದ ತುಲ್ಸಾದಲ್ಲಿ ಮೊದಲ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಚೀನಾ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ಕೊರೋನಾವೈರಸ್ ನಂತಹ ಭೀಕರ ಕಾಯಿಲೆ ಇತಿಹಾಸದಲ್ಲಿ ಇರಲಿಲ್ಲ. ಜಾನ್ಸ್ ಹಾಪ್ ಕಿನ್ಸ್ ಕೊರೋನಾ ವೈರಸ್ ಸಂಶೋಧನಾ ಕೇಂದ್ರದ ಪ್ರಕಾರ, ವಿಶ್ವದಾದ್ಯಂತ 4 ಲಕ್ಷದ 50 ಸಾವಿರ ಜನರು ಕೊರೋನಾದಿಂದ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 8.5 ಮಿಲಿಯನ್ ಆಗಿದೆ. ಅಮೆರಿಕಾದಲ್ಲಿ 1 ಲಕ್ಷದ 19 ಸಾವಿರ ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 2.2 ಮಿಲಿಯನ್ ಆಗಿದೆ. ಇದನ್ನೂ ಬೊಟ್ಟುಮಾಡಿದ ಟ್ರಂಪ್, ಚೀನಾ ವಿರುದ್ಧ ಮತ್ತೊಂದು ಸುತ್ತಿನ ಚಾಟಿ ಬೀಸಿದ್ದಾರೆ.