ಬೀಜಿಂಗ್: ಲಡಾಖ್ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಭಾರತ – ಚೀನಾ ಹೆಚ್ಚುವರಿ ಸೇನೆ ಹಿಂಪಡೆಯಲು ಆರಂಭಿಸಿದ್ದು, ಬಿಕ್ಕಟ್ಟಿನ ಪರಿಸ್ಥಿತಿಯನ್ನು ಹಗುರಗೊಳಿಸಲು ಎರಡೂ ರಾಷ್ಟ್ರಗಳು ಸಕಾರಾತ್ಮಕ ಒಪ್ಪಂದಕ್ಕೆ ಬಂದಿವೆ ಎಂದು ಚೀನಾ ತಿಳಿಸಿದೆ.
ಕಳೆದ ಒಂದು ತಿಂಗಳಿಂದ ಉತ್ತರ ಲಡಾಖ್ನ 5 ಗಡಿ ಪ್ರದೇಶದಲ್ಲಿ ಭಾರತ – ಚೀನಾ ನಡುವೆ ಎದುರಾಗಿದ್ದ ಬಿಕ್ಕಟ್ಟು ಪರಿಹರಿಸಲು ಬುಧವಾರ ಉಭಯ ರಾಷ್ಟ್ರಗಳ ಸೇನೆಯ ನಡುವೆ ಎರಡನೇ ಹಂತದ ಸಭೆ ನಡೆದಿದೆ.
ಅಂತೆಯೇ ಕಳೆದ ಶನಿವಾರವೂ ಉಭಯ ರಾಷ್ಟ್ರಗಳ ನಡುವೆ ಮಿಲಿಟರಿ ಹಂತದ ಮೊದಲ ಸುತ್ತಿನ ಸಭೆ ನಡೆದಿದ್ದು, ಇದಾದ ಬಳಿಕ ಗಡಿಯಿಂದ ಹೆಚ್ಚುವರಿ ಸೇನೆಯನ್ನು ಹಿಂಪಡೆಯಬೇಕೆಂಬ ಭಾರತದ ಒತ್ತಾಯಕ್ಕೆ ಚೀನಾ ಮಣಿದು, ಯೋಧರನ್ನು ಚೀನಾ ಹಿಂಪಡೆದಿತ್ತು. ಆದರೆ ಚೀನಾ – ಭಾರತ ತಮ್ಮ ಸಂಪೂರ್ಣ ಹೆಚ್ಚುವರಿ ಸೇನೆ ಹಿಂಪಡೆದಿಲ್ಲ. ಬದಲಿಗೆ ಸೀಮಿತ ಸೈನಿಕರನ್ನು ಮಾತ್ರವೇ ಹಿಂಪಡೆದಿವೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡಿದ್ದವು. ಈ ನಿಟ್ಟಿನಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ಈ ಹೇಳಿಕೆ ನೀಡಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ ಸಭೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ್ದು, ಎರಡು ದೇಶಗಳು ಗಡಿಯಿಂದ ತಮ್ಮ ತಮ್ಮ ಹೆಚ್ಚುವರಿ ಸೇನೆಯನ್ನು ಹಿಂಪಡೆಯುತ್ತಿದ್ದು, ಈ ಹಿಂದಿನ ಸ್ಥಾನಕ್ಕೆ ಮರಳುತ್ತಿವೆ. ಬಿಕ್ಕಟ್ಟಿನ ಪರಿಸ್ಥಿತಿ ಹಗುರಗೊಳಿಸಲು ಎರಡು ರಾಷ್ಟ್ರಗಳೂ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆಷ್ಟೇ ಉಭಯ ರಾಷ್ಟ್ರಗಳ ನಡುವೆ ನಡೆದ ಮೊದಲ ಸುತ್ತಿನ ಮಿಲಿಟರಿ ಸಭೆ ಪರಿಣಾಮಕಾರಿಯಾಗಿತ್ತು. ಅಂತೆಯೇ ಗಡಿಯಲ್ಲಿ ಶಾಂತಿ ಸ್ಥಾಪಿಸಲು ಸಕಾರಾತ್ಮಕ ಒಪ್ಪಂದಕ್ಕೆ ಎರಡು ರಾಷ್ಟ್ರಗಳು ಬಂದಿವೆ ಎಂದು ತಿಳಿಸಿದ್ದಾರೆ. ಇನ್ನ ಗಡಿಯಲ್ಲಿ ಪರಿಸ್ಥಿತಿ ಸ್ಥಿರ ಹಾಗೂ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದೂ ಹೇಳಿದ್ದಾರೆ.
10 ಸಾವಿರ ಸೈನಿಕರ ಹಿಂಪಡೆಯಲು ಭಾರತ ಪಟ್ಟು: ಲಡಾಖ್ ಗಡಿಯಲ್ಲಿ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಸೇನೆ ಹಿಂದಕ್ಕೆ ಸರಿದರೂ, ಹೆಚ್ಚುವರಿಯಾಗಿ ನಿಯೋಜಿಸಿರುವ 10 ಸಾವಿರ ಸೈನಿಕರನ್ನು ಚೀನಾ ಹಿಂಪಡೆಯಬೇಕು ಎಂದು ಭಾರತ ಪಟ್ಟು ಹಿಡಿದಿದೆ. ಚೀನಾ ಅಪಾರ ಸೈನಿಕರನ್ನು ಹಿಂಪಡೆಯಬೇಕು ಹಾಗೂ ಶಸ್ತ್ರಾಸ್ತ್ರಗಳನ್ನು ವಾಪಸ್ ಪಡೆಯಬೇಕು ಎಂದು ಭಾರತ ಆಗ್ರಹಿಸಿದೆ.