ಕೋಲ್ಕತ: ಭಾರತ ಶಾಂತಿ ಪ್ರಿಯ ದೇಶ.ಆದರೆ ಯಾರಾದರೂ ನಮ್ಮ ಮೇಲೆ ಕಾಕದೃಷ್ಟಿ ಬೀರಿದ್ದೇ ಆದರೆ ನಾವು ತಕ್ಕ ಉತ್ತರ ನೀಡಲು ಶಕ್ತರಿದ್ದೇವೆ ಎಂಬುದಾಗಿ ಹೇಳಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಇತ್ತೀಚಿನ ಚೀನೀ Appಗಳ ನಿಷೇಧ ಒಂದು “ಡಿಜಿಟಲ್ ಸ್ಟ್ರೈಕ್ “ಎಂಬುದಾಗಿ ಬಣ್ಣಿಸಿದ್ದಾರೆ.ಈಗ ಚೀನೀ Appಗಳನ್ನು ನಿಷೇಧಿಸುವ “ಡಿಜಿಟಲ್ ಸ್ಟ್ರೈಕ್ “ಮೂಲಕ ನಮ್ಮ ದೇಶವಾಸಿಗಳ ಮಾಹಿತಿಗಳನ್ನು ರಕ್ಷಿಸಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ನಾಯಕತ್ವವನ್ನು ಶ್ಲಾಘಿಸಿದ ಅವರು, ನಿಜ , ನಮ್ಮ ೨೦ ಯೋಧರು ಬಲಿದಾನ ಮಾಡಿದ್ದಾರೆ. ಇದೇ ವೇಳೆ ಅತ್ತ ಚೀನಾದ ದುಪ್ಪಟ್ಟು ಮಂದಿಯನ್ನು ಹೊಡೆದುರುಳಿಸಿದ್ದಾರೆ .ಈಗ ನಾವು ಕೇಳುತ್ತಿರುವುದು ಎರಡು ‘ಸಿ’ಗಳ ಬಗ್ಗೆ …-ಇದು ಕೊರೋನಾ ವೈರಸ್ ಮತ್ತು ಚೀನಾ. ನಾವು ಶಾಂತಿ ಮತ್ತು ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳುವುದರಲ್ಲಿ ನಂಬಿಕೆ ಹೊಂದಿರುವವರು.ಆದರೆ ಯಾರಾದರೂ ನಮ್ಮತ್ತ ಕೆಟ್ಟ ದೃಷ್ಟಿ ಬೀರಿದ್ದೇ ಆದರೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂಬುದಾಗಿ ಅವರು, ಬೆಂಗಾಲಿ ಜನರಿಗಾಗಿ ಆಯೋಜಿಸಲಾಗಿದ್ದ ವರ್ಚುವಲ್ ರ್ಯಾಲಿಯಲ್ಲಿ ನುಡಿದರು.
ನಾವು ಉರಿ ಮತ್ತು ಪುಲ್ವಾಮದ ಬಳಿಕ ಭಾರತ ಹೇಗೆ ಪ್ರತ್ಯುತ್ತರ ನೀಡಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು.ನಮ್ಮ ಪ್ರಧಾನಿಯವರು , ನಮ್ಮ ಯೋಧರ ಬಲಿದಾನ ವ್ಯರ್ಥವಾಗದು ಎಂದು ಹೇಳಿದರೆ ಅದು ನಮ್ಮ ಸರಕಾರ ಕೃತಿ ರೂಪದಲ್ಲಿ ಉತ್ತರ ನೀಡುತ್ತದೆ ಎಂದರ್ಥ ಎಂದು ಅವರು ಒತ್ತಿ ಹೇಳಿದರು.
ಆದರೆ ಆಳುವ ಟಿಎಂಸಿಯು ಚೀನೀ Appಗಳ ನಿಷೇಧವನ್ನು ಯಾಕೆ ವಿರೋಸುತಿದೆ ಎಂಬುದು ತಿಳಿಯಬೇಕಾಗಿದೆ .ಈ ಹಿಂದೆ ನಾವು ಚೀನೀ ಆಪ್ಗಳನ್ನು ಯಾಕೆ ವಿರೋಧಿಸಿಲ್ಲ ಎಂಬುದಾಗಿ ಟಿಎಂಸಿ ಪ್ರಶ್ನಿಸಿತ್ತು. ಆದರೆ ಈಗ ಯಾಕೆ ನಿಷೇಧಿಸಿದಿರಿ ಎಂದು ಕೇಳುತ್ತಿದೆ .ದೇಶ ಎದುರಿಸುತ್ತಿರುವ ಬಿಕ್ಕಟ್ಟಿನ ವೇಳೆ ಇವರಿಗೆ ಯಾಕೆ ಸರಕಾರದ ಜೊತೆ ನಿಲ್ಲಲು ಆಗುತ್ತಿಲ್ಲ ಎಂಬುದಕ್ಕೆ ಉತ್ತರ ಬೇಕಾಗಿದೆ ಎಂದರು. ತೃಣಮೂಲ ಕಾಂಗ್ರೆಸ್ನ ಸಂಸದೆ ನುಸ್ರತ್ ಜಹಾನ್ ಈ ಬಗ್ಗೆ ಕೇಂದ್ರವನ್ನು ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಾಗೆಯೇ ಸಿಪಿಎಂ ಕೂಡಾ ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆ ನಿಗೂಢ ಮೌನ ತಾಳಿದೆ.ಸಿಪಿಎಂಗೆ ಯಾಕೆ ಚೀನಾವನ್ನು ಖಂಡಿಸಲು ಸಾಧ್ಯವಾಗುತ್ತಿಲ್ಲ ?ಸಿಪಿಎಂ ಇನ್ನೂ ೧೯೬೨ರ ಮಾನಸಿಕತೆಯಲ್ಲೇ ಇದೆಯೇ ಎಂದು ಅವರು ಪ್ರಶ್ನಿಸಿದರು.ಭಾರತದಲ್ಲಿನ ಕಮ್ಯುನಿಸ್ಟರು ೧೯೬೨ರಲ್ಲಿ ಚೀನಾ ಆಕ್ರಮಣದ ವೇಳೆ ಚೀನಾ ಪರ ನಿಂತು ಮಾತೃಭೂಮಿ ವಿರುದ್ಧವೇ ಧ್ವನಿ ಎತ್ತಿದ್ದನ್ನು ಉಲ್ಲೇಖಿಸಿ ಅವರು ಈ ರೀತಿ ಪ್ರಶ್ನಿಸಿದರು.