ಹೊಸ ದಿಗಂತ ವರದಿ ಶಿವಮೊಗ್ಗ:
ದೇಶದಲ್ಲಿ ವಾತಾವರಣ ಹೇಗಿದೆ ಎಂದರೆ ಚುನಾವಣೆ ಎಂದರೇನೆ ಬಿಜೆಪಿಯ ಗೆಲವು ಕಾಂಗ್ರೆಸ್ ಸೋಲು ಎಂಬಂತಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ತಮ್ಮನ್ನ ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, ಶಿರಾ, ಆರ್.ಆರ್.ನಗರ ಗೆದ್ದಾಗಿದೆ. ಬಿಹಾರ ರಾಜ್ಯದಲ್ಲಿ ಸಮೀಕ್ಷೆಗಳನ್ನೂ ಮೀರಿ ಗೆಲ್ಲುತ್ತಿದ್ದೇವೆ. ಮಧ್ಯಪ್ರದೇಶದಲ್ಲಿ 17 ಬಿಜೆಪಿ ಸದಸ್ಯರು ಗೆಲ್ಲುತ್ತಿದ್ದಾರೆ. ಯಾವ ಚುನಾವಣೆ ಬಂದರೂ ಬಿಜೆಪಿ ಗೆಲ್ಲುವಂತಾಗಿದೆ. ರಾಜ್ಯದಲ್ಲಿ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಮತ್ತು ಬೆಳಗಾಂನ ಲೋಕಸಭಾ ಉಪಚುನಾವಣೆಯನ್ನ ಎದುರು ನೋಡ್ತಾ ಇದ್ದೇವೆ. ಇಲ್ಲೂ ಸಹ ಬಿಜೆಪಿ ಗೆಲ್ಲಲಿದೆ. ದೇಶದಲ್ಲಿ ಚುನಾವಣೆ ಎಂದರೇನೆ ಕಾಂಗ್ರೆಸ್ ಸೋಲು-ಬಿಜೆಪಿ ಗೆಲವು ಎಂಬಂತಾಗಿದೆ ಎಂದರು.
ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ ನಂತರ ಸಚಿವ ಸಂಪುಟ ಪುನರ್ ರಚನೆ ಎಂದು ಹೇಳಲಾಗುತ್ತಿತ್ತು, ಸಚಿವ ಸಂಪುಟ ವಿಸ್ತರಣೆನೋ ಅಥವಾ ಪುನರ್ ರಚನೆಯೋ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಬೈ ಎಲೆಕ್ಷನ್ ಮುಗಿದ ನಂತರ ಸಿಎಂ ದೆಹಲಿಗೆ ಹೋಗ್ತೀನಿ ಎಂದಿದ್ದರು. ಯಾವಾಗ ಹೋಗ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಹೈಕಮಾಂಡ್ ಮತ್ತು ಸಿಎಂಗೆ ಬಿಟ್ಟವಿಚಾರ ಎಂದು ತಿಳಿಸಿದರು.
ಸಿಗಂದೂರಿನಲ್ಲಿ ಸಮಿತಿ ಹಿಂಪಡೆಯಲು ಹೋರಾಟ ಸಮಿತಿ 15 ದಿನ ಗಡುವು ನೀಡಿದೆ. ಹಿಂಪಡೆಯದಿದ್ದರೆ ಹೋರಾಡುವುದಾಗಿ ಸಮಿತಿ ಸಭೆ ತೀರ್ಮಾನಿಸಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.