ಉಡುಪಿ: ಗಡಿಗಳಲ್ಲಿರುವ ಚೆಕ್ಪೋಸ್ಟ್ಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಮಹಾರಾಷ್ಟ್ರದಿಂದ ಬಂದು ಮನೆ ಸೇರಲು ಯತ್ನಿಸಿದ ಯುವಕನೊಬ್ಬನನ್ನು ಮನೆಯವರು ಮತ್ತು ನೆರೆಹೊರೆಯವರು ಸೇರಿ ದಿಗ್ಬಂಧನಕ್ಕೆ ಕಳುಹಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಮಹಾರಾಷ್ಟ್ರದ ನಾಸಿಕ್ನಲ್ಲಿ ವೃತ್ತಿಯಲ್ಲಿತ್ತಿದ್ದ ಯುವಕ ವಾಹನಗಳನ್ನು ಬದಲಿಸುತ್ತ ಜಿಲ್ಲೆಯ ಉತ್ತರ ಗಡಿಯ ಶಿರೂರು ಚೆಕ್ಪೋಸ್ಟ್ಗಿಂತ ಹಿಂದೆಯೇ ಇಳಿದುಕೊಂಡಿದ್ದಾನೆ. ಸ್ನೇಹಿತನಿಗೆ ಕರೆಮಾಡಿ ಬೈಕ್ ತರಿಸಿಕೊಂಡು ಚೆಕ್ಪೋಸ್ಟ್ನ ತಪಾಸಣೆಗೆ ಒಳಗಾಗದೆ ಅವನ ಜೊತೆ ಮರವಂತೆ ಸಮೀಪದ ನಡುಬೆಟ್ಟು ಎಂಬಲ್ಲಿರುವ ಮನೆಗೆ ಬಂದಿದ್ದಾನೆ.
ಹೊರರಾಜ್ಯದಿಂದ ಬಂದರೆ ನೇರವಾಗಿ ಮನೆಗೆ ಸೇರಲು ಅವಕಾಶ ಇಲ್ಲ ಎಂಬ ಮಾಹಿತಿ ತಿಳಿದ ಮನೆಯವರು ಮತ್ತು ಅಕ್ಕಪಕ್ಕದವರು ಅವನನ್ನು ಮನೆಗೆ ಸೇರಿಸಿಕೊಳ್ಳಲಿಲ್ಲ. ಅವನು ಹಾಗೆ ಬಂದಿರುವ ವಿಷಯವನ್ನು ಗ್ರಾ.ಪಂ. ಆಡಳಿತದ ಗಮನಕ್ಕೆ ತಂದಿದ್ದಾರೆ. ಪಂಚಾಯತ್ ಆಡಳಿತ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ತಿಳಿಸಿದ್ದಾರೆ. ವೈದ್ಯರು ಅವನನ್ನು ಕುಂದಾಪುರದಲ್ಲಿ ಪ್ರಾಥಮಿಕ ಪರೀಕ್ಷೆ ನಡೆಸಿ, ಸರಕಾರಿ ದಿಗ್ಬಂಧನ ಕೇಂದ್ರಕ್ಕೆ ಕಳುಹಿಸಿದ್ದಾರೆ.