‘ಶ್ರೀಕೃಷ್ಣ’ ಆಹಾ!!! ಈ ಪದವೇ ಹಾಗೆ. ಬಾಲರಿಂದ ವೃದ್ಧರಾದಿಯಾಗಿಯೂ ಇಷ್ಟಪಡುವ ಹೆಸರು. ಈ ಹೆಸರಲ್ಲೊಂದು ಆಕರ್ಷಣೆ ಇದೆ. ಸೆಳೆತವಿದೆ. ದೈವತ್ವವಿದೆ, ಅಗಾಧ ಶಕ್ತಿ ಇದೆ. ಇನ್ನೊ ಆ ದಿವ್ಯ ರೂಪದ ಕುರಿತು ಹೇಳುವುದೇ ಬೇಡ. ಅವನ ಸೌಂದರ್ಯ ರೂಪದ ವರ್ಣನೆ ಲೇಖನಿಗೆ ಮೀರಿದ್ದು. ಶಾಂತಿ ತುಂಬಿದ ಮೊಗ, ನೀಲಿಯ ವರ್ಣ, ಕೈಲೊಂದು ಪುಟ್ಟ ಕೊಳಲು, ಅಗತ್ಯಕ್ಕನುಸಾರ ತಿರುಗುವ ಸುದರ್ಶನ ಚಕ್ರ, ತಲೆಯ ಮೇಲೊಂದು ನವಿಲು ಗರಿ. ಸದಾ ಅಲಂಕೃತವಾಗಿರುವ ಶಾಂತ ಚಲುವಿನ ಮುಖದಲ್ಲಿ ಮುದ್ದು ನಗು. ಎಲ್ಲವನ್ನು ಅರಿತೂ ಅರಿಯದಂತೆ ನಿಂತ ಚಾಣಾಕ್ಷ, ಜಗನಿಯಮಕನ ನಗು ಸದಾ ಕಾಡುವಂತದ್ದು.
ಶ್ರೀ ಕೃಷ್ಣ ದೇವರು, ಜಗತ್ತಿನ ನಿಯಮ ಬರೆಯುವವ ಎನ್ನುವದಕ್ಕಿಂತ, ಭಕ್ತರ ತುಂಟ ಕೃಷ್ಣ, ಆತ್ಮೀಯ, ಪ್ರೀತಿಯ ರಾಯಭಾರಿ, ಕಷ್ಟದಲ್ಲಿ ಕಾಪಾಡುವ ಸ್ನೇಹಮಯಿ, ಪ್ರತಿಮನೆಯಲ್ಲಿ ತುಂಟ ಮಕ್ಕಳಲ್ಲಿ ಕಾಣಿಸುವ ಬೆಣ್ಣೆ ಕೃಷ್ಣ. ಎಲ್ಲಾ ಮಕ್ಕಳಂತೆಯೇ ಬಾಲಕೃಷ್ಣನೂ ಚೇಷ್ಟೆ ಮಾಡಿದವನೇ. ಮಣ್ಣು ತಿನ್ನುತ್ತಿದ್ದ, ಬೆಣ್ಣೆ ಕದ್ದು ತಿಂದು ಬೈಸಿಕೊಳ್ಳುತ್ತಿದ್ದ, ಮೊಸರು ಗಡಿಗೆ ಒಡೆದು ಅಮ್ಮನ ಕೈಲಿ ಕಿವಿ ಹಿಂಡಿಸಿಕೊಳ್ಳುತ್ತಿದ್ದ. ಗೋಪಿಕೆಯರ ಸೀರೆ ಕದ್ದು ಬಚ್ಚಿಡುತ್ತಿದ್ದ. ಆದರೆ ಅವನಿಂತಹ ತುಂಟಾಟಗಳಿಂದ ಅರಿಯದೇ ಅವನ ಮೇಲೆ ಮುಗ್ಧ ಪ್ರೀತಿ ಅರಳುತ್ತದೆ. ದೇವರೆಂಬುದು ಮರೆತು ಹೋಗುತ್ತದೆ.
ಚಿಕ್ಕವನಿರುವಾಗಲೇ ರಾಕ್ಷಸರ ಸಂಹಾರ ಮಾಡಿ ಬಲಾಢ್ಯ ಕೃಷ್ಣನಂತೆ ಗೋಚರಿಸುತ್ತಾನೆ. ಗೋಪಾಲಕರ ಮಧ್ಯೆ ಸಾಮಾನ್ಯನಂತೆ ಬದುಕುತ್ತಾನೆ ಗೋಪಾಲಕ. ಮಣ್ಣುಂಡೆ ಬಾಯಿಯಲ್ಲಿ ಹಾಕಿಕೊಂಡಾಗ ಬಾಯಿ ತೆರೆಸಿದ ಯಶೋದೆಗೆ ಬೃಹ್ಮಾಂಡವನ್ನೇ ತೋರಿಸಿ ಮತ್ತೆ ಯಶೋದೆಯ ಅಪ್ಪುಗೆಯಿಂದ ಪುಟ್ಟ ಮಗುವಾಗುತ್ತಾನೆ. ಎಂಥಾ ರಾಕ್ಷಸರನ್ನು ಸಂಹಾರ ಮಾಡಿದರೇನು ಆ ತಾಯಿಗೆ ಅವನು ಪುಟ್ಟ ಮಗುವೇ ಅಲ್ಲವೇ? ” ಜಗದೋದ್ದಾರನ ಆಡಿಸಿದಳ್ಯಶೋದೆ. ಸುಗುಣಾಂತರಂಗನ ಆಡಿಸಿದಳ್ಯಶೋದೆ.” ನಿಜಕ್ಕೂ ಯಶೋದೆ ಪುಣ್ಯವಂತೆ. ಇಡೀ ಜಗತ್ತನ್ನೇ ತನ್ನ ಕಿರುಬೆರಳಲ್ಲಿ ಆಡಿಸುವ ಕೃಷ್ಣ ಆಕೆಯ ಮಡಿಲಲ್ಲಿ ಮಗುವಾಗಿ ಆಡುವುದೆಂದರೆ ಸಾಮಾನ್ಯವಾದದ್ದಲ್ಲ. ಅಲ್ಲಿಯೇ ಅವನ ವ್ಯಕ್ತಿತ್ವದ ಘನತೆ ಅಡಗಿರುವುದು. ಶ್ರೀ ಕೃಷ್ಣನ ವ್ಯಕ್ತಿತ್ವದ ಸೊಗಡೇ ಹಾಗೆ.
ಕೊಳಲನೂದುವ ಮುರಳಿಧರನಾಗಿ, ತಾಯಿಗೆ ಮಗನಾಗಿ, ಗೆಳೆಯರಿಗೆ ಮಿತ್ರನಾಗಿ, ಗೋವುಗಳ ಪಾಲಕನಾಗಿ, ಗೋಪಿಕೆಯರನ್ನು ಛೇಡಿಸುವ ಪೋಲಿಯಾಗಿ, ದುಷ್ಟ ಮಾವನ ಪಾಲಿಗೆ ಯಮನಾಗಿ, ತಂಗಿಯ ರಕ್ಷಣೆಗೆ ನಿಲ್ಲುವ ಅಣ್ಣನಾಗಿ, ಅಣ್ಣನ ಪ್ರೀತಿಯ ತಮ್ಮನಾಗಿ, ತನ್ನ ನಂಬಿದವರನ್ನು ಸಂಕಷ್ಟದಿಂದ ಪಾರುಮಾಡುವ ದೇವನಾಗಿ, ಭಗವದ್ಗೀತೆಯ ಭೊದಕನಾಗಿ, ಸಾರಥಿಯಾಗಿ, ಸಂಧಾನಕನಾಗಿ, ಇಷ್ಟೆಲ್ಲ ಪಾತ್ರ ನಿಭಾಯಿಸಿದರು ಎಲ್ಲರ ಮಧ್ಯೆ ತಾನೇನು ಅಲ್ಲ ಎಂಬಂತೆ ಜೀವಿಸಿ, ಕಮಲಪತ್ರದ ಮೇಲಿನ ನೀರಹನಿಯಂತೆ ಯಾವುದನ್ನು ಅಂಟಿಸಿಕೊಳ್ಳದ ಪರಿಪೂರ್ಣ ಕೃಷ್ಣನ ಚಿತ್ರಣ ನಮ್ಮ ಮುಂದೆ ಬರುತ್ತದೆ. ಇಂಥ ವಿಶೇಷ ವ್ಯಕ್ತಿತ್ವದ ಕೃಷ್ಣನ ಜನನವು ರೋಮಾಂಚನಕಾರಿಯಾದದ್ದು.
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ ಎಂಟನೇಯ ಮಗನಾಗಿ ಜನಿಸುತ್ತಾನೆ. ದೇವಕಿಯ ಅಣ್ಣ ಕಂಸ. ಮಥುರಾ ನಗರದಲ್ಲಿ ರಾಜನಾಗಿದ್ದ ಉಗ್ರಸೇನನ ಮಗನೇ ಕಂಸ. ತನ್ನ ಮುದ್ದಿನ ತಂಗಿಯಾದ ದೇವಕಿಯನ್ನು ವಸುದೇವನಿಗೆ ಕೊಟ್ಟು ಕಂಸ ಮದುವೆ ಮಾಡುತ್ತಾನೆ. ದೇವಕಿಯನ್ನು ಗಂಡನ ಮನೆಗೆ ಕರೆದೊಯ್ಯುವಾಗ ಒಂದು ಅಶರೀರ ವಾಣಿ ಕೇಳಿಸುತ್ತದೆ. ಅದರ ಪ್ರಕಾರ ದೇವಕಿಯ ಎಂಟನೇ ಮಗುವು ಕಂಸನನ್ನು ವಧನ ಮಾಡುತ್ತದೆ ಎಂದು.
ಇದನ್ನು ಕೇಳಿ ಕಂಸನು ದೇವಕಿಯನ್ನು ತಕ್ಷಣ ಕೊಲ್ಲಲು ಹೊರಡುತ್ತಾನೆ. ಆಗ ವಸುದೇವನು ಅವನನ್ನು ತಡೆದು, ಪ್ರತಿ ಮಗುವು ಹುಟ್ಟಿದ ತಕ್ಷಣ ಕಂಸನ ಮಡಿಲಿಗೆ ಅರ್ಪಿಸುವುದಾಗಿ ಹೇಳುತ್ತಾನೆ. ನಂತರ ಕಂಸ ದೇವಕಿ ವಸುದೇವರನ್ನು ಕಾರಾಗೃಹದಲ್ಲಿ ಬಂಧಿಸುತ್ತಾನೆ.ಇವರಿಗೆ ಹುಟ್ಟಿದ ಏಳು ಮಕ್ಕಳನ್ನು ಕಂಸ ನಿರ್ದಯೆಯಿಂದ ಕೊಲ್ಲುತ್ತಾನೆ. ಎಂಟನೇಯ ಮಗುವಾಗಿ ಹುಟ್ಟಿದ ಶ್ರೀ ಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ತಂದೆ ವಸುದೇವನು ಗುಟ್ಟಾಗಿ ರಾತ್ರೊರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ಗೋಕುಲಕ್ಕೆ ಬರುತ್ತಾನೆ. ಅಲ್ಲಿ ಯಶೋದೆ ಮತ್ತು ನಂದಗೋಪರ ಶಿಶುವಿನ ಜಾಗದಲ್ಲಿ ಕೃಷ್ಟನನ್ನು ಮಲಗಿಸಿ, ಆ ಮಗುವನ್ನು ಎತ್ತಿಕೊಂಡು ಕಾರಾಗೃಹಕ್ಕೆ ತೆರಳುತ್ತಾನೆ. ಕಂಸ ಯಥಾಪ್ರಕಾರ ದೇವಕಿಗೆ ಹುಟ್ಟಿದ ಮಗುವೆಂದು ಭ್ರಮಿಸಿ ಮಗುವನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಒಂದು ಪವಾಡ ನಡೆಯುತ್ತದೆ. ಶಿಶು ” ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಗೆ ಬಂದಾಗಿದೆ” ಎಂದು ಹೇಳಿ ಅಂತರ್ಧನವಾಗುತ್ತದೆ.
ಹೀಗಾಗಿ ಕೃಷ್ಣನ ಹುಟ್ಟಿದ ದಿನವನ್ನು ಹಿಂದೂಗಳು ನಾಡಿನ ದೊಡ್ಡ ಹಬ್ಬಗಳ ಸಾಲಿಗೆ ಸೇರಿಸಿದ್ದಾರೆ. ಮಲೆನಾಡಿನವರು ಕೆಮ್ಮಣ್ಣು, ಶೇಡಿಯಿಂದ ಕೃಷ್ಣನ ಪುಟ್ಟ ಹೆಜ್ಜೆಗಳನ್ನು ಬಿಡಿಸಿ ನೂರಾಎಂಟು ತುಳಸಿಯೊಂದಿಗೆ ಅದನ್ನು ಪೂಜಿಸುತ್ತಾರೆ. ತಿಂಗಳ ಹಿಂದೆಯೇ ಉಪ್ಪಿನಲ್ಲಿ ನೆನೆಸಿಟ್ಟ ಹಲಸಿನ ತೊಳೆಯಿಂದ ಸಿಹಿ ಉಂಡಲೇಕಾಳನ್ನು, ಜೊತೆಗೆ ಬೆಣ್ಣೆಯನ್ನು ಕೃಷ್ಣನಿಗೆ ನೈವೇದ್ಯ ಮಾಡುತ್ತಾರೆ.
ಭಕ್ತಿಗೊಲಿಯುವ ದೇವ, ಪ್ರೀತಿಗೊಲಿಯುವ ಪ್ರೀಯಕರ, ಲೀಲೆಯಲ್ಲಿ ತುಂಟ, ಆಧ್ಯಾತ್ಮದ ವಾರಸುದಾರ. ಇಂತಹ ಪರಮಾತ್ಮನ ಹುಟ್ಟುಹಬ್ಬ ಹಿಂದುಗಳಿಗೆಲ್ಲ ಮಹತ್ವ ಪೂರ್ಣ ಹಬ್ಬ. ಪ್ರತಿ ವರ್ಷಕ್ಕೊಂದು ದಿನ ಆತನನ್ನು ನೆನೆದುಕೊಂಡು ದಿವ್ಯ ಚೇತನವನ್ನು ನಮ್ಮೊಳಗೆ ಆವ್ಹಾನಿಸುವ ಶುಭದಿನ ಈ ಕೃಷ್ಣಾಷ್ಟಮಿ.
-ಕಾವ್ಯಾ ಜಕ್ಕೊಳ್ಳಿ