Wednesday, July 6, 2022

Latest Posts

ಜಗತ್ತು-ದೈವೀ ಶಕ್ತಿ, ಆಸುರೀ ಶಕ್ತಿಗಳ ರಣರಂಗ: ಹಿಂದು ವಿರೋಧಿ ಗುಂಪುಗಳ ಹಾರಾಟಕ್ಕೆ ಬೆದರಬೇಕಾಗಿಲ್ಲ

-ಹೆ.ಬಾ.ಮಲ್ಯ

ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದು ಎಲ್ಲರೂ ಬಯಸುತ್ತಾರೆ.  “ನಮ್ಮ ಮತ ಶಾಂತಿಯ ಸಂದೇಶ ಸಾರುತ್ತದೆ” ಎಂದು  ಮುಸ್ಲಿಂ – ಕ್ರೈಸ್ತ  ಚರ್ಚ್ ಆದಿಯಾಗಿ ಎಲ್ಲರೂ ವೇದಿಕೆಗಳಿಂದ ಅಬ್ಬರದ  ಪ್ರಚಾರ ಮಾಡುತ್ತಾರೆ.  ಎಲ್ಲ ಢೋಂಗಿ. ಯುರೋಪ್ ಮತ್ತು ಮಧ್ಯ ಏಷಿಯಾದ ನೆಲದಲ್ಲಿ ಇಸ್ಲಾಮಿನ ಜೆಹಾದ್ ಮತ್ತು ಕ್ರೈಸ್ತ ಪೋಪರ ಕ್ರುಸೇಡ್ಸ್ ಗಳಿಂದಾಗಿ  ರಕ್ತದ ನದಿಗಳೇ ಹರಿದಿವೆ. ಪಾಶ್ಚಾತ್ಯ ಹಾಗೂ ಮಧ್ಯಪೂರ್ವ ದೇಶಗಳ ಇತಿಹಾಸ ಈ ರಕ್ತಸಿಕ್ತ ಪುಟಗಳಿಂದ ತುಂಬಿವೆ. ಜಗತ್ತನ್ನು ಸಾವಿರ ವರ್ಷಗಳಿಂದ  ಕಾಡಿದ ಈ ಎರಡು ಮತಾಂಧ ಜನಾಂಗಗಳ ನಡುವಣ ಯುದ್ಧಗಳ ಬಗ್ಗೆ ಸ್ಯಾಮ್ಯುವೆಲ್ ಹಂಟಿಂಗ್ಟನ್ “Clashes of civilizations” (ನಾಗರೀಕತೆಗಳೊಳಗಣ ಸಂಘರ್ಷ) ಎಂಬ ಗ್ರಂಥವನ್ನೇ ಬರೆದಿದ್ದಾನೆ. ಈ ಬಗ್ಗೆ ನಾವು ಯಾವ ಪುಸ್ತಕವನ್ನೂ ಓದಬೇಕಾಗಿಲ್ಲ. ನಮಗೆ ಹಿಂದುಗಳಿಗಂತೂ ಸಾವಿರ ವರ್ಷಗಳ ಸುದೀರ್ಘ ಅನುಭವವಿದೆ. ಈ ಇಸ್ಲಾಮಿಕ್ ಹಾಗೂ ಚರ್ಚ್ ಗಳ ಆಕ್ರಮಣ ಇನ್ನೂ ಮುಗಿದಿಲ್ಲ. ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ. ಜಗತ್ತಿನ ಶಾಂತಿಪ್ರಿಯ, ಪ್ರಜಾಪ್ರಭುತ್ವವಾದೀ ರಾಷ್ಟ್ರಗಳು ಒಂದುಗೂಡಿ ಈ ಭಯೋತ್ಪಾದಕ ಶಕ್ತಿಗಳನ್ನು ಬೇರುಸಹಿತ ಕಿತ್ತೆಸೆಯುವ ವರೆಗೆ ಈ ಎರಡು ಮತಾಂಧ ಶಕ್ತಿಗಳ ಪೀಡೆ ಮುಂದುವರಿಯುತ್ತದೆ. ಭಾರತದ ಮಟ್ಟಿಗೆ ಹೇಳಬೇಕೆಂದರೆ ಕಮ್ಯುನಿಸಂ – ನಕ್ಸಲಿಸಂ ಮುಂತಾದ ಎಡಪಂಥೀಯ ಶಕ್ತಿಗಳನ್ನೂ ಈ ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ.  ಇಲ್ಲವಾದಲ್ಲಿ ಭಾರತದಲ್ಲೂ ನೆಮ್ಮದಿ ಯಿಂದ ನಿದ್ದೆ ಮಾಡುವಂತಿಲ್ಲ, ಜಗತ್ತಿನಲ್ಲೂ ಶಾಂತಿ ಇಲ್ಲ. ಹಿಂದು ಜನಾಂಗ ಹಾಗೂ ಧರ್ಮ ಇನ್ನೂ ಉಳಿದಿರುವುದು, ಈ ಮಹತ್ಕಾರ್ಯವನ್ನು ಸಾಧಿಸಿ ಜಗತ್ತಿನಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಲಿಕ್ಕಾಗಿಯೇ.
ಈ ಸಂಘರ್ಷ ಜಗತ್ತಿನ ಸಮಸ್ಯೆ ಮಾತ್ರವಲ್ಲ. ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿಕೊಂಡಿದೆ. ಜಾಗತಿಕ ಮಟ್ಟದಿಂದ ಹಿಡಿದು, ರಾಷ್ಟ್ರ, ರಾಜ್ಯ- ಜಿಲ್ಲೆ- ಪಂಚಾಯತು, ಗ್ರಾಮಗಳು, ಕುಟುಂಬಗಳು ಹಾಗೂ ಕೊಟ್ಟ ಕೊನೆಯದಾಗಿ ಒಬ್ಬನೇ ವ್ಯಕ್ತಿಯೊಳಗೆ ಈ ದೈವೀ ಹಾಗೂ ಆಸುರೀ ಶಕ್ತಿಗಳು ಅಡಗಿರುತ್ತವೆ. ಜಗತ್ತಿನ ರಾಷ್ಟ್ರಗಳೊಳಗೆ ಹಿಡಿದು ವ್ಯಕ್ತಿಯೊಳಗಿನವರೆಗೆ ಈ ಎರಡು ಶಕ್ತಿಗಳೊಳಗೆ ನಿರಂತರ ಸಂಘರ್ಷ ನಡೆಯುತ್ತಲೇ ಇರುತ್ತದೆ.

ಇದಕ್ಕೆ ಕೊನೆ ಎಂದು ಎಂಬುದು ಅರ್ಥಹೀನ ಪ್ರಶ್ನೆ.  ಶಾಂತಿ ಎಂದರೆ ಎರಡು ಯುದ್ಧಗಳ ನಡುವಣ ಅಲ್ಪ ಕಾಲಾವಧಿ ಅಷ್ಟೇ. ಮುಂದಿನ ಯುದ್ಧಕ್ಕೆ ಸಜ್ಜಾಗುವ ಅವಧಿ. ಸಂಘರ್ಷ ನಿರಂತರ – ಶಾಶ್ವತ. ಶಾಂತಿ ಕ್ಷಣಿಕ. ಇದು ಈ ಪ್ರಪಂಚ ವ್ಯವಸ್ಥೆಯ ವಾಸ್ತವಿಕತೆ. ಈಗ ಭಾರತದ  ಪರಿಸ್ಥಿತಿಯ ಬಗ್ಗೆ ಬರುವ ಸಂಘರ್ಷದ ಆರಂಭ ಸೃಷ್ಟಿಯ ಆರಂಭದೊಂದಿಗೇ ಶುರುವಿಟ್ಟುಕೊಳ್ಳುತ್ತದೆ. ಕೃತಯುಗದಲ್ಲಿ ದೇವಿ ಹಾಗೂ ಅಸುರರೊಳಗಣ ಯುದ್ಧ, ಹಿರಾಣ್ಯಾಕ್ಷ-ಹಿರಣ್ಯಕಶಿಪು, ತ್ರೇತಾಯುಗದಲ್ಲಿ ರಾಮ-ರಾವಣ ಯುದ್ಧ, ದ್ವಾಪರ ಯುಗದಲ್ಲಿ ಕೃಷ್ಣ – ಕಂಸ, ಜರಾಸಂಧ, ಶಿಶುಪಾಲ, ದಂತವಕ್ರ, ದುರ್ಯೋಧನಾದಿ ಆಸುರೀ ಪ್ರವೃತ್ತಿಯ ರಾಜರೊಂದಿಗಿನ ಯುದ್ಧ, ದೇವಾಸುರರೊಳಗಿನ ಯುದ್ಧ, ಧರ್ಮರಕ್ಷಣೆಗಾಗಿ ಕೃಷ್ಣನವರೆಗೆ ಎಂಟು ಅವತಾರಗಳು, ಹೀಗೆ ಸಂಘರ್ಷದಿಂದಲೇ ತುಂಬಿದೆ ಈ ವಿಶ್ವದ ಇತಿಹಾಸ. ಕಲಿಯುಗದಲ್ಲೂ ಹಿಂದುಸ್ಥಾನದ ಮೇಲೆ ಗ್ರೀಸ್‌ನ ಅಲೆಕ್ಸಾಂಡರ್, ಹೂಣರು, ಜೀಣರು, ಶಕರು, ಮಂಗೋಲಿಯನ್ನರು, ತುರ್ಕರು, ಪಠಾಣರು, ಮೊಗಲರು,  ಇತರ ಜಾತಿಯ ಮುಸ್ಲಿಮರು, ಫ್ರೆಂಚರು, ಪೋರ್ಚುಗೀಸರು, ಬ್ರಿಟಿಷರು ಹೀಗೆ ನಮ್ಮ ದೇಶದ ಮೇಲೆ ಆಕ್ರಮಣ ಮಾಡದ ಜನಾಂಗಗಳೇ ಇಲ್ಲವೆನ್ನಬಹುದು. ಇದರ ಅರ್ಥ ಇಷ್ಟೇ. ಭಾರತ ಬಿಟ್ಟು ಮಿಕ್ಕ ಪ್ರಪಂಚದ  ಜನರಿಗೆ ಯಾವ ಶ್ರೇಷ್ಠ ಸಂಸ್ಕೃತಿಯೂ ಇಲ್ಲ. ಭಾರತ ಮಾತ್ರ ಈ ಎಲ್ಲ ಆಕ್ರಮಣಗಳನ್ನು ಯಶಸ್ವಿಯಾಗಿ ಎದುರಿಸಿದ್ದಷ್ಟೇ ಅಲ್ಲ ತನ್ನ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ಏಕೆಂದರೆ ಮಹೋನ್ನತ ಹಾಗೂ ಅದ್ಭುತ ಗುರುಕುಲ ಶಿಕ್ಷಣ ಪದ್ಧತಿಯ ಮೂಲಕ  ಇಲ್ಲಿ ಶ್ರೇಷ್ಠ ಮಾನವೀಯ ಮೌಲ್ಯಗಳಾದ  ಸತ್ಯ, ಧರ್ಮ, ನೈತಿಕತೆ, ಅಹಿಂಸೆ, ಬ್ರಹ್ಮಚರ್ಯ, ಚತುರ್ವಿಧ ಪುರುಷಾರ್ಥಗಳು , ಶ್ರೇಷ್ಠ ವರ್ಣಾಶ್ರಮ ವ್ಯವಸ್ಥೆ ರೂಪುಗೊಂಡಿತು. ಬಾಲ್ಯದಿಂದಲೇ ಶಿಸ್ತು, ಸಮಯಪಾಲನೆ, ಗುರುಹಿರಿಯರನ್ನು ಗೌರವಿಸುವ ಸಂಸ್ಕೃತಿ, ಕೂಡುಕುಟುಂಬ ವ್ಯವಸ್ಥೆ, ಧೈರ್ಯ, ಸಾಹಸ,  ಪರಾಕ್ರಮ, ಕ್ಷಮಾಗುಣ, ಅನುಕಂಪ, ಸೇವಾಭಾವನೆ, ರಾಷ್ಟ್ರಭಕ್ತಿ ಮುಂತಾದ ಶ್ರೇಷ್ಠ ಗುಣಗಳನ್ನು ಅವರಲ್ಲಿ ತುಂಬುವ ವ್ಯವಸ್ಥೆಯಿಂದಾಗಿ  ಒಂದು ಶ್ರೇಷ್ಠ ಧರ್ಮ, ಶ್ರೇಷ್ಠ ಸಂಸ್ಕೃತಿ, ಅದ್ಭುತ ಜೀವನಶೈಲಿ, ಜಾಗತಿಕ ವ್ಯವಸ್ಥೆ  ವಿಕಾಸಗೊಂಡಿದೆ. ಆದ್ದರಿಂದಲೇ ಒಂದು ಕಾಲದಲ್ಲಿ ಭಾರತ ಭೂಮಂಡಲವನ್ನೇ ಗೆದ್ದು ಆಳಿತ್ತು. ವೇದಕಾಲದಿಂದ ಇಂದಿನವರೆಗೂ ಈ ಸಂಸ್ಕೃತಿ ಉಳಿದುಕೊಂಡು ಬರಲು ಸಾಧ್ಯವಾಯಿತು. “ಸತ್ಯಮೇವ ಜಯತೇ”- ಸತ್ಯ- ನ್ಯಾಯ-ಧರ್ಮ- ನೈತಿಕತೆಗಳಿಗೇ ಅಂತಿಮ ಜಯ  ಎಂಬ ತತ್ವವನ್ನು ಈ ಜನಾಂಗ ಸಿದ್ಧ ಮಾಡಿ ತೋರಿಸಿದೆ. ದುಷ್ಟ ಶಿಕ್ಷಣ- ಶಿಷ್ಟ ರಕ್ಷಣೆಯೇ ಹಿಂದು ಜನಾಂಗದ ವೈಶಿಷ್ಟ್ಯ ಹಾಗೂ ಉದ್ದೇಶ. ಎಲ್ಲ ಅವತಾರಗಳ ಉದ್ದೇಶವೂ ಇದೇ. ಈ ನಂಬಿಕೆ ಬಲವಾಗಿದ್ದು ದರಿಂದಲೇ ಈ ಶ್ರೇಷ್ಠ ಧರ್ಮ ಸಂಸ್ಕೃತಿ ಇನ್ನೂ ಉಳಿದುಕೊಂಡು ಬಂದಿದೆ.

ಈಗ ಭಾರತದ ಪರಿಸ್ಥಿತಿಯನ್ನು ಅವಲೋಕಿಸುವಾಗ ಇಲ್ಲಿ  ಸ್ಪಷ್ಟವಾದ ಎರಡು ಗುಂಪುಗಳಿವೆ. ಒಂದು ಆರ್.ಎಸ್.ಎಸ್. – ಸಂಘ ಪರಿವಾರ-ಮೋದಿ  ಇರುವ ದೈವೀಶಕ್ತಿಯ ಬಲವಾದರೆ ಈ ಶಕ್ತಿಯನ್ನು  ಸೋಲಿಸಲು ಸದಾ ಸಜ್ಜಾಗಿ ನಿಂತಿರುವ  ದುಷ್ಟಕೂಟ. ಇದರಲ್ಲಿ ಎಲ್ಲ ಸ್ವಾರ್ಥಿಗಳು, ಲಂಪಟರು, ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು, ಭಯೋತ್ಪಾದಕರು, ದೇಶದ್ರೋಹಿಗಳು, ಅಧಿಕಾರ ಪಿಪಾಸುಗಳು, ವಂಶಾಡಳಿತ ಮುಂದುವರಿಸಲು ಶ್ರಮಿಸುತ್ತಿರುವವರು ಎಲ್ಲರೂ ಸೇರಿದ್ದಾರೆ. ಬಾಲ್ಯದಲ್ಲೇ  ವಿಶ್ವಾಮಿತ್ರರೊಂದಿಗೆ ಅರಣ್ಯಕ್ಕೆ ತೆರಳಿ ರಾಕ್ಷಸರೊಡನೆ ಯುದ್ಧ ಮಾಡಿ ಅಂತಿಮವಾಗಿ ರಾವಣರ ವಧೆಯ ವರೆಗೆ ನಡೆದ ಸಂಘರ್ಷದ ಕತೆಗೆ ರಾಮಾಯಣ ಎಂದು ಹೆಸರು. ಅದರರ್ಥ ಮಿಕ್ಕ ಭಾಗಗಳಾದ ರಾಮರಾಜ್ಯ ಇತ್ಯಾದಿಗಳನ್ನು ನಗಣ್ಯ ಎಂದುಕೊಳ್ಳಬಾರದು. ನಂತರ ದ್ವಾಪರ ಯುಗದಲ್ಲಿ  ನಡೆದ ಅಂತಿಮ ಸಂಘರ್ಷವೇ ಮಹಾಭಾರತ-ಕುರುಕ್ಷೇತ್ರ. ನಂತರ ಕಲಿಯುಗದಲ್ಲಿ ಚಾಣಕ್ಯ -ಚಂದ್ರಗುಪ್ತ, ಛತ್ರಪತಿ ಶಿವಾಜಿ, ವಿವೇಕಾನಂದ, ಡಾ. ಹೆಡಗೇವಾರ್, ಸಾವರ್ಕರ್, ಸುಭಾಷ್‌ಚಂದ್ರ ಬೋಸ್, ಕ್ರಾಂತಿಕಾರಿಗಳು, ಗಾಂಧೀಜೀವರೆಗೆ ಈ ಸಂಘರ್ಷ ಮುಂದುವರೆದುಕೊಂಡು ಬಂತು.

ಇನ್ನು ಭಾರತದೊಳಗಣ ಅಂದರೆ ಉತ್ತರ -ದಕ್ಷಿಣ, ಆರ್ಯ-ದ್ರಾವಿಡ, ದಲಿತ-ಬ್ರಾಹ್ಮಣ, ಹಿಂದು-ಮುಸ್ಲಿಂ, ಹಿಂದು-ಚರ್ಚ್, ರಾಜಕೀಯ ಪಕ್ಷಗಳೊಳಗಣ ಸಂಘರ್ಷ, ಕುಟುಂಬದ ಒಳಗಣ ಕಲಹ, ಗಂಡ-ಹೆಂಡತಿಯರೊಳಗಿನ ವಿರಸ,  ವ್ಯಕ್ತಿಯ ಅಂತರ್ಮನದಲ್ಲಿ ನಡೆಯುತ್ತಿರುವ ರಾಮ-ರಾವಣ ಯುದ್ಧ ಹಾಗೂ ಮಹಾಭಾರತ   ಇವುಗಳ ಬಗ್ಗೆ ನೀವೇ ಊಹಿಸಿಕೊಳ್ಳಬಹುದು. ಅದರ ಬಗ್ಗೆ ನಾನೇನೂ  ಹೇಳುವ ಅಗತ್ಯವಿಲ್ಲ. ಆದರೆ ಭಾರತದ ಮಹೋನ್ನತ ಸಂಸ್ಕೃತಿಯ ನಿರಂತರ ಪ್ರಯತ್ನ ಒಂದೇ. ದುಷ್ಟ ನಿಗ್ರಹ-ಶಿಷ್ಟ ರಕ್ಷಣೆ. ಸತ್ಯಮೇವ ಜಯತೇ. ಅದರಿಂದ ಒಂದಷ್ಟು ಕಾಲ ಶಾಂತಿ. ಆದರೆ ಅದು ತಾತ್ಕಾಲಿಕ. ಅದೊಂದು ಭವ್ಯ ಕನಸು -ಆಸೆ ಮಾತ್ರ. ಆ ಆಸೆಯಿಂದಲೇ ನೆಮ್ಮದಿಯ ಜೀವನ. ಆದರೆ ಒಳಿತು-ಕೆಡುಕುಗಳೊಳಗಣ ಸಂಘರ್ಷವೇ ಶಾಶ್ವತ, ನಿತ್ಯ, ಸತ್ಯ. ಒಮ್ಮೆ ಗುರೂಜೀ ಗೋಳ್ವಲ್ಕರ್ ಅವರನ್ನು ಓರ್ವ ಕಾರ್ಯಕರ್ತ ಕೇಳಿದರು “ಸಂಘ ಕಾರ್ಯಕ್ಕೆ ಕೊನೆ ಎಂದು?” ಗುರೂಜಿ ಹೇಳಿದ್ದರು “ಶಿಕ್ಷಣ , ಸಂಸ್ಕಾರ ನಿರಂತರವಾದುದು. ಹಳೆ ಕಾರ್ಯಕರ್ತರ ಪೀಳಿಗೆ ಹಾಗೂ ಇತರ ಸಮಾಜದ ಜನ ಅಳಿದು ಹೊಸ ಪೀಳಿಗೆ ಬರುತ್ತಲೇ ಇರುತ್ತವೆ. ಅದಕ್ಕೆ ಕೊನೆಯೆಂಬುದಿಲ್ಲ” ಅಂದರೆ ಅರ್ಥ ಇಷ್ಟೇ – ಹಿಂದು ಸಮಾಜದ ಮೇಲೆ ಇಂದು ಇರುವಂತೆ ಮುಂದೆಯೂ ಆಕ್ರಮಣ ನಡೆಯುತ್ತಲೇ ಇರುತ್ತದೆ. ಹಿಂದು ಸಮಾಜ ಅದನ್ನೆಲ್ಲ  ಎದುರಿಸಿ ಗೆದ್ದು ವಿಶ್ವವ್ಯಾಪಿಯಾಗಬೇಕು, ಜಗದ್ಗುರುವಾಗಬೇಕು. ಇದು ನಮ್ಮ ಕನಸು, ಆಸೆ. ಈ ಕನಸನ್ನು ಸಾಕಾರ ಮಾಡಲು ನಿರಂತರ ಪ್ರೇರಣೆ ಪಡೆದು ಪರಿಶ್ರಮ ಪಡಬೇಕು. ಈ ಕರ್ಮಕ್ಕೆ ಯಾವ ಪ್ರತಿಫಲವನ್ನೂ ಅಪೇಕ್ಷಿಸುವುದು ಸರಿಯಲ್ಲ. ಇದು ನಿಷ್ಕಾಮಕರ್ಮ, ಫಲಾಪೇಕ್ಷೆ ಇಲ್ಲದ ಸೇವೆ. ಇದು ಪ್ರತಿ ಹಿಂದುವಿನ ಸಹಜ ಸ್ವಭಾವವಾದಲೇ ಹಿಂದು ಸಮಾಜ ಸುರಕ್ಷಿತವಾಗಿರುತ್ತದೆ. ಹಿಂದುಗಳು ಸಂಘಟಿತರಾದಾಗ ಪ್ರಚಂಡ  ಸತ್‌ಶಕ್ತಿ ನಿರ್ಮಾಣವಾಗುತ್ತದೆ. ಹಾಗಾಗಿ ಇಂದಿನ ಈ ಹಿಂದು ವಿರೋಧಿ ಗುಂಪುಗಳ ವ್ಯರ್ಥಾಲಾಪ, ಹಾರಾಟ, ಚೀರಾಟಗಳಿಗೆ ಬೆದರಬೇಕಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss