Thursday, July 7, 2022

Latest Posts

ಜಗದೊಡೆಯನ ಕ್ಷೇತ್ರ ಕೃಷ್ಣಮಠದಲ್ಲಿ ಬಾಲಗೋಪಾಲನಿಗೆ ಉದ್ವಾರ್ಚನೆಯ ಸಂಭ್ರಮ

ಉಡುಪಿ: ದೇವಳ ನಗರಿ ಉಡುಪಿಯಲ್ಲಿ ಜಗದೊಡೆಯನ ಕ್ಷೇತ್ರ ಕೃಷ್ಣಮಠದಲ್ಲಿ ಭಾನುವಾರ ಬಾಲಗೋಪಾಲನಿಗೆ ಉದ್ವಾರ್ಚನೆಯ ಸಂಭ್ರಮ. ಯತಿಗಳು ಕೃಷ್ಣನ ಶಯನಗ್ರಹ ಶುಚಿಗೊಳಿಸಿದರೆ, ಕಡೆಗೋಲ ಕೃಷ್ಣ ಕಣ್ಣಿಗೆ ಧೂಳು ಬೀಳದಂತೆ ಬಿದಿರಿನ ಚಾಪೆ ಸುತ್ತಿ, ಮೇಲೊಂದು ಓಲೆಗರಿಯ ಛತ್ರಿ ಧರಿಸಿ ಕುಳಿತಿದ್ದ!
ಉಡುಪಿ ಶ್ರೀಕೃಷ್ಣಮಠದಲ್ಲಿ ವಾರ್ಷಿಕ ಸ್ವಚ್ಛತಾ ಕಾರ್ಯಕ್ರಮವೇ ಉದ್ವಾರ್ಚನೆ. ಪರ್ಯಾಯ ಶ್ರೀಪಾದರೂ ಸೇರಿ ಅಷ್ಟಮಠಗಳ ಯತಿಗಳೆಲ್ಲರೂ ಆಷಾಢ ಅಷ್ಟಮಿಯಂದು ಕೃಷ್ಣಮಠದ ಗರ್ಭಗುಡಿಯೊಳಗೆ ಸ್ವಚ್ಛತಾ ಕಾರ್ಯ ನಡೆಸುತ್ತಾರೆ. ಪೂಜಾ ಸಾಮಾಗ್ರಿಗಳು ಸಹಿತ ಎಲ್ಲ ಸರಕು ಸರಂಜಾಮುಗಳನ್ನು ತೊಳೆದು ಶುಭ್ರವಾಗಿಸಲಾಗುತ್ತದೆ. ಮಧ್ವಾಚಾರ್ಯರು ಮಠದಲ್ಲಿ ಸ್ಥಾಪಿಸಿದ ಶ್ರೀಕೃಷ್ಣನ ಮೂರ್ತಿಯನ್ನು ಅಷ್ಟಮಠಗಳ ಯತಿಗಳ ಹೊರತು ಬೇರೆ ಯಾರೂ ಸ್ಪರ್ಶಿಸುವಂತಿಲ್ಲ. ಹಾಗಾಗಿ ವಿಗ್ರಹವನ್ನು ಪ್ರತಿಷ್ಠಾಪಿಸಿದ ಕೋಣೆ(ಗರ್ಭಗುಡಿ)ಯಲ್ಲಿ ಯತಿಗಳೇ ಸ್ವಚ್ಛತಾ ಕಾರ್ಯ ನಡೆಸುತ್ತಾರೆ.
ಭಾನುವಾರ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಶ್ರೀಕೃಷ್ಣ ಮಠದಲ್ಲಿ ಉದ್ವಾರ್ಚನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯತಿಗಳೆಲ್ಲಾ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಭಾಗಿಗಳಾದರು. ಮಠದೊಳಗಿನ ಕೆಲಸದವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಬಳಿಕ ಪರ್ಯಾಯ ಶ್ರೀಗಳು ಶ್ರೀಕೃಷ್ಣನಿಗೆ ಸ್ವರ್ಣ ಕವಚ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.
ಆಷಾಢ ಮಾಸದ ದಶಮಿಯಂದು ಶ್ರೀಕೃಷ್ಣನಿಗೆ ವಾರ್ಷಿಕ ಮಹಾ ಅಭಿಷೇಕ ನಡೆಯುತ್ತದೆ. ಅದರಂತೆ ಈ ಬಾರಿಯ ವಾರ್ಷಿಕ ಮಹಾ ಅಭಿಷೇಕ ಜೂ. 30ರಂದು ಜರಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss