Sunday, July 3, 2022

Latest Posts

ಜನತೆಗೆ ಜಾಗೃತಿ ಮೂಡಿಸಲು ನಡೆಯಲಿದೆ 3 ಹಂತದಲ್ಲಿ `ಸಕಾಲ ಸಪ್ತಾಹ’

ಹೊಸ ದಿಗಂತ ವರದಿ, ಮಂಗಳೂರು:

ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಸಕಾಲ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ದಿಸೆಯಲ್ಲಿ ಜನತೆಗೆ ಅರಿವು ಮೂಡಿಸುವ ಸಲುವಾಗಿ `ಸಕಾಲ ಸಪ್ತಾಹ’ವನ್ನು ಆಚರಿಸಲಾಗುವುದು ಎಂದು ಸಕಾಲ ಯೋಜನೆಯ ಹೆಚ್ಚುವರಿ ಮಿಷನ್ ನಿರ್ದೇಶಕಿ ಡಾ.ಬಿ.ಆರ್ ಮಮತಾ ತಿಳಿಸಿದ್ದಾರೆ.
ಅವರು ಗುರುವಾರ ರಾಜ್ಯದ ಎಲ್ಲಾ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡುತ್ತಿದ್ದರು.
ಸರಕಾರದ ಸೇವೆಗಳನ್ನು ವಿಳಂಬವಿಲ್ಲದೆ ಕಾಲಮಿತಿಯೊಳಗೆ ನೀಡುವ ಸದುದ್ದೇಶದಿಂದ ಕರ್ನಾಟಕ ನಾಗರಿಕ ಸೇವೆಗಳ ಖಾತ್ರಿ ಅಧಿನಿಯಮವನ್ನು 2012ರಲ್ಲಿ ಜಾರಿಗೆ ತರಲಾಗಿದೆ ಎಂದರು.
2020 ನ.30ರಿಂದ ಡಿ.5ರ ತನಕ ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಸಾರಿಗೆ ಇಲಾಖೆಯಲ್ಲಿ ಸಪ್ತಾಹ ಆಚರಿಸಲಾಗುವುದು. ಡಿ.7ರಿಂದ 12ರ ತನಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ, ಡಿ.14ರಿಂದ ಡಿ.19ರ ತನಕ ಉಳಿದ ಎಲ್ಲಾ ಇಲಾಖೆಗಳಲ್ಲಿ ಸಪ್ತಾಹವನ್ನು ಆಚರಿಸಲಾಗುವುದು ಎಂದವರು ವಿವರಿಸಿದರು.
ಸಕಾಲ ಯೋಜನೆಯಡಿ ಒಟ್ಟು 98 ಇಲಾಖೆಗಳಲ್ಲಿ 1,020ಕ್ಕೂ ಅಧಿಕ ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ. ಈ ತನಕ ಸಕಾಲ ಯೋಜನೆಯಡಿ 22,88,81,652 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 22,82,55,866 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಮಮತಾ ತಿಳಿಸಿದರು.
ಸಕಾಲ ಯೋಜನೆಯ ಬಗ್ಗೆ ಜನರಿಗೆ ವ್ಯಾಪಕ ಪ್ರಚಾರ ಹಾಗೂ ಮಾಹಿತಿ ನೀಡಬೇಕು. ಇಲಾಖೆಗಳಲ್ಲ್ಲಿ ಅವಧಿ ಮೀರಿ ಬಾಕಿ ಉಳಿದಿರುವ ಅರ್ಜಿಗಳ ಪ್ರಮಾಣವನ್ನು ತಗ್ಗಿಸುವ ದಿಸೆಯಲ್ಲಿ ಕಾನೂನಿನ ವ್ಯಾಪ್ತಿಯೊಳಗೆ ಅವುಗಳನ್ನು ವಿಲೇವಾರಿ ಮಾಡಬೇಕು. ಒಂದು ವೇಳೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ ಸೂಕ್ತ ಸಮರ್ಥನೆ ನೀಡಬೇಕು. ಎಲ್ಲ ಕಚೇರಿಗಳಲ್ಲಿ ಸಕಾಲ ಸೇವೆಗಳ ಬಗ್ಗೆ ಮಾಹಿತಿಯ ಭಿತ್ತಿ ಪತ್ರವನ್ನು ಅಳವಡಿಸಬೇಕು ಎಂದು ಅವರು ಸೂಚಿಸಿದರು.
ಜನತೆಗೆ ಅರ್ಜಿಯ ಬಗ್ಗೆ ಗೊಂದಲ ಅಥವಾ ಸಮಸ್ಯೆ ಉಂಟಾದರೆ ಸಕಾಲದಲ್ಲಿ ಅರ್ಜಿ ಸ್ವೀಕೃತಿ ಆಗುವ ಕಚೇರಿಗಳಲ್ಲಿ ಕಡ್ಡಾಯವಾಗಿ ಹೆಲ್ಪ್‌ಡೆಸ್ಕ್, ಸಹಾಯವಾಣಿಯನ್ನು ನಮೂದಿಸಬೇಕು. ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದ ಹೇಳಿದ ಅವರು, ಅಪರ ಜಿಲ್ಲಾಧಿಕಾರಿಗಳು ಹಾಗೂ ಇತರ ಇಲಾಖಾ ಅಧಿಕಾರಿಗಳ ತಂಡ ರೂಪಿಸಿ ಕಚೇರಿಗಳಿಗೆ ಭೇಟಿ ನೀಡಿ ಪ್ರಕ್ರಿಯೆಯನ್ನು ಪರಿಶೀಲಿಸಬೇಕು ಎಂದರು.
ಸಭೆಯಲ್ಲಿ ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕ ಅಶ್ವಿನ್‌ಕುಮಾರ್ ರೈ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss