ಜನತೆಗೆ ವೈರಸ್ ಹರಡದಂತೆ ಎಚ್ಚರವಹಿಸಬೇಕಾಗಿರುವುದು ಯಡಿಯೂರಪ್ಪನವರ ಕರ್ತವ್ಯವಲ್ಲವೇ?

0
129

ಕಾಸರಗೋಡು: ಕೇರಳದಿಂದ ಕರ್ನಾಟಕ ರಾಜ್ಯ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನೂ ಮುಚ್ಚಿದ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿದೆ. ರಾಜ್ಯಗಳು ಸಂಪರ್ಕಿಸುವ 13 ರಸ್ತೆಗಳನ್ನು ಮಣ್ಣು ಹಾಗೂ ಬ್ಯಾರಿಕೇಡ್‌ಗಳನ್ನು ಬಳಸಿ ಮುಚ್ಚಲಾಗಿದೆ. ಅನೇಕರು ಕರ್ನಾಟಕದ ತೀರ್ಮಾನವನ್ನು ಸ್ವಾಗತಿಸಿದರೆ ಇನ್ನು ಕೆಲವರು ಕರ್ನಾಟಕ ರಾಜ್ಯವನ್ನು, ಮುಖ್ಯಮಂತ್ರಿ ಯಡಿಯೂರಪ್ಪನವರನ್ನೂ ದೂರುತ್ತಿದ್ದಾರೆ.
ನಂ.1 ರಾಜ್ಯ ಕೇರಳ ಹೌದೇ?
ನಂ. 1 ಎಂದು ಹೇಳಿಕೊಳ್ಳುತ್ತಿರುವ ಕೇರಳ ರಾಜ್ಯವು ತನ್ನ ಹೆಚ್ಚಿನ ಎಲ್ಲಾ ಅವಶ್ಯಕತೆಗಳಿಗೆ ಕರ್ನಾಟಕವನ್ನೇ ಅವಲಂಬಿಸಿಕೊಳ್ಳುವುದು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಮಂಗಳೂರು ಹಾಗೂ ಪುತ್ತೂರು ಮೊದಲಾದೆಡೆಗಳಿಗೆ ಕೇರಳದ ಮಲಯಾಳಿಗಳು ತೆರಳುತ್ತಿದ್ದಾರೆ.
ಕಾಸರಗೋಡು ಕಣ್ಣೂರು ತನಕ ಜನತೆ ವೈದ್ಯಕೀಯ ಅವಶ್ಯಕತೆಗಳಿಗೆ ಮಂಗಳೂರನ್ನು ಅವಲಂಬಿಸುತ್ತಿದ್ದಾರೆ. ನಂ.1 ರಾಜ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲವೇ? ಸಾಧ್ಯಾವಾಗಿದ್ದಲ್ಲಿ ಕರ್ನಾಟಕವನ್ನು ಅವಲಂಬಿಸಬೇಕಾದ ಪರಿಸ್ಥಿತಿ ರಾಜ್ಯದ ಜನತೆಗೆ ಬಂದೊದಗುತ್ತಿರಲಿಲ್ಲ. ಬಾರಿ ಬಾರಿ ಕಾಸರಗೋಡು ಜಿಲ್ಲೆಯಿಂದ ಆಯ್ಕೆಯಾದ ಶಾಸಕರು, ಸಂಸದರು ರಾಜ್ಯಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವಂತಾಗಿದೆ. ಮುಸ್ಲಿಂಲೀಗ್ ಶಾಸಕರು, ಕಾಂಗ್ರೆಸ್, ಮಾರ್ಕಿಸ್ಟ್ ಸಂಸದರು ಆಯ್ಕೆಯಾದರೂ ಕಾಸರಗೋಡಿನ ಜನತೆಗೆ ಏನನ್ನು ನೀಡಿದ್ದಾರೆ.? ಕೇರಳದ ಅದೆಷ್ಟೋ ಮಂದಿ ಮಲಯಾಳಿಗಳು ಉದ್ಯೋಗಕ್ಕಾಗಿಯೂ ಕರ್ನಾಟಕ ರಾಜ್ಯವನ್ನು ಆಯ್ಕೆಮಾಡಿಕೊಂಡಿದ್ದಾರೆ. ಕೇರಳದಲ್ಲಿ ಉದ್ಯೋಗವಿಲ್ಲವೇ?
ಗಡಿ ಬಂದ್ ಮಾಡಿದ ಕರ್ನಾಟಕ ಸರಕಾರ 
ಇಡೀ ಭಾರತ ದೇಶದಲ್ಲೇ ಅತಿಹೆಚ್ಚು ಕೋವಿಡ್ 19 ಪ್ರಕರಣ ದಾಖಲಾದ ಹೊಂದಿದ ಜಿಲ್ಲೆಯಾಗಿದೆ ಕಾಸರಗೋಡು. ಕೊರೊನಾ ವೈರಸ್ ವಿಚಾರದಲ್ಲಿ ಕೇಂದ್ರ ಸರಕಾರದ ಅತಿಸೂಕ್ಷ್ಮ ಪ್ರದೇಶವೂ ಆಗಿದೆ ಕಾಸರಗೋಡು. ಈಗಾಗಲೇ 89 ಮಂದಿ ಕೊರೊನಾ ಬಾಧಿತರಾಗಿ ಚಿಕಿತ್ಸೆಯಲ್ಲಿಯೂ ಇದ್ದಾರೆ. ಅದೆಷ್ಟೋ ಮಂದಿ ವಿದೇಶದಿಂದ ಆಗಮಿಸಿದವರು ಆರೋಗ್ಯ ಇಲಾಖೆಯ ನಿಗಾದಲ್ಲಿಯೂ ಇದ್ದಾರೆ. ವಿದೇಶದಿಂದ ಆಗಮಿಸಿ ನಾಡಿನೆಲ್ಲೆಡೆ ಸುತ್ತಾಡಿ, ಸಾವಿರಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕವನ್ನು ಹೊಂದಿ ಈಗ ರೋಗಬಾಧಿತನಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಂದಿಯೂ ಇರುವಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ, ಜನತೆಗೆ ವೈರಸ್ ಹರಡದಂತೆ ಎಚ್ಚರವಹಿಸಬೇಕಾಗಿರುವುದು ರಾಜ್ಯದ ಮುಖ್ಯಮಂತ್ರಿಯಾದ ಯಡಿಯೂರಪ್ಪನವರ ಕರ್ತವ್ಯವಲ್ಲವೇ?. ಈ ನಿಟ್ಟಿನಲ್ಲಿ ಕರ್ನಾಟಕದ ನಿರ್ಧಾರ ಸರಿಯಾಗಿಯೇ ಇದೆಯಲ್ಲವೇ? ಕನ್ನಡಿಗರು ಉದ್ಯೋಗ, ವಿದ್ಯಾಭ್ಯಾಸ, ವೈದ್ಯಕೀಯ ಯಾವುದಕ್ಕೂ ಕೇರಳವನ್ನು ಆಶ್ರಯಿಸಿದ ಪುರಾವೆಯೇ ಇಲ್ಲ. ಉದ್ಯೋಗ, ವಿದ್ಯಾಭ್ಯಾಸ, ಆರೋಗ್ಯಪರವಾದ ಕಾರ್ಯಗಳಿಗೆ ಕರ್ನಾಟಕಕ್ಕೆ ತೆರಳುವವರು ಕೇರಳದ ಮಲಯಾಳಿಗಳಾಗಿದ್ದಾರೆ. 15 ಲಕ್ಷಕ್ಕೂ ಹೆಚ್ಚು ಮಲಯಾಳಿಗಳು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.
ಕಾಸರಗೋಡು ಕನ್ನಡ ನಾಡು 
`ಕಾಸರಗೋಡು ಕನ್ನಡ ನಾಡು ಮಣ್ಣಾಂಕಟ್ಟ’ ಎಂದು ಮಲಯಾಳಿಯೋರ್ವ ಫೇಸ್ ಬುಕ್ ಪೋಸ್ಟ್ ಮಾಡಿದ್ದಾನೆ. ಅನೇಕರು ಆತನಿಗೆ ಬೆಂಬಲವನ್ನೂ ನೀಡಿದ್ದಾರೆ. ಕೇರಳದಲ್ಲಿ ಕನ್ನಡವನ್ನೇ ಇಲ್ಲವಾಗಿಸಬೇಕೆಂದೂ, ಬಸ್ ಹಾಗೂ ಇನ್ನಿತರೆಡೆಗಳಲ್ಲಿ ಕನ್ನಡವನ್ನು ಬಳಸಲೇ ಬಾರದು ಎಂಬಂತೆ ಅವರ ಪೋಸ್ಟ್‌ನಲ್ಲಿದೆ.
ಕಾಸರಗೋಡಿನ ಶಾಸಕರು, ಸಂಸದರನ್ನು ಆಯ್ಕೆ ಮಾಡಿದ ಜನರೇ ಇಂದು ಈ ರೀತಿ ಪೋಸ್ಟ್ ಮಾಡುತ್ತಿದ್ದಾರೆ. ಅಂದರೆ ಕಾಸರಗೋಡಿನ ಅಧೋಗತಿಗೆ ಯಾರು ಕಾರಣ ಎಂಬುದನ್ನು ಮೊದಲು ಆಲೋಚಿಸಬೇಕಾಗಿದೆ. ನಂ. 1 ರಾಜ್ಯದಲ್ಲಿ ಏನೂ ಇಲ್ಲವೇ? ಯಾವುದೇ ಸೌಲಭ್ಯವಿಲ್ಲವೇ? ಪಿಣರಾಯಿ ಆಡಳಿತದ ರಾಜ್ಯ ನಂ.೧ ಯಾವುದಕ್ಕೆ ಎಂದು ಜನ ಕೇಳುವಂತಾಗಿದೆ.

LEAVE A REPLY

Please enter your comment!
Please enter your name here