Monday, August 8, 2022

Latest Posts

ಜನರಲ್ಲಿ ಆತಂಕ ಸೃಷ್ಟಿಸಿದ ಕೊರೋನಾ ಸೋಂಕು: ಸಕ್ರಿಯ ಸೋಂಕಿತರಲ್ಲಿ ಉಡುಪಿ 3ನೇ ಸ್ಥಾನ

ಉಡುಪಿ: ನಿನ್ನೆ ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ 73 ಖಚಿತ ಕೋವಿಡ್ ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ ನೋವೆಲ್ ಕೊರೋನಾ ವೈರಸ್. ಪ್ರಸ್ತುತ ಉಡುಪಿ ಜಿಲ್ಲೆ ಸಕ್ರಿಯ ಪ್ರಕರಣಗಳಲ್ಲಿ 3ನೇ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ ಪ್ರಕರಣಗಳ ಏರಿಕೆಯ ರೇಖೆ ಮೇಲ್ಮುಖವಾಗಿಯೇ ಮುಂದುವರಿಯುತ್ತಿದೆ. ಒಟ್ಟು 260 ಕೋವಿಡ್ ಪ್ರಕರಣಗಳಿದ್ದರೆ, ಈ ಪೈಕಿ 195 ಸಕ್ರಿಯ ಪ್ರಕರಣಗಳಾಗಿವೆ. ಜಿಲ್ಲೆಯ ಒಟ್ಟು ಪ್ರಕರಣಗಳಲ್ಲಿ ಉಡುಪಿ ಐದನೇ ಸ್ಥಾನದಲ್ಲಿದೆ. ಆದರೆ 24 ತಾಸುಗಳ ಅವಧಿಯಲ್ಲಿ ಸೋಂಕು ಪತ್ತೆಯಾಗಿರುವುದಲ್ಲಿ 73 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಲಕ್ಷ ಜನರಲ್ಲಿ 3013 ಮಂದಿಯ ಮಾದರಿ ಸಂಗ್ರಹ: ಕಳೆದ 10 ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 1ಲಕ್ಷ ಜನರಿಗೆ 3013 ಜನರ ಗಂಟಲ ದ್ರವ ಪಡೆದು ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದ್ದರೆ, ರಾಜ್ಯದಲ್ಲಿ ಲಕ್ಷ ಜನರಿಗೆ 1596 ಮಂದಿಯ ಗಂಟಲ ದ್ರವ ಪಡೆಯಲಾಗಿದೆ. ಅಂದರೆ ರಾಜ್ಯದಲ್ಲಿ ಸರಾಸರಿ ಪರೀಕ್ಷೆ ಮಾಡುವ ಎರಡು ಪಟ್ಟು ಜನರಿಗೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

100ರಲ್ಲಿ 3-4 ಜನರಿಗೆ ಕೋವಿಡ್: ಉಡುಪಿ ಜಿಲ್ಲೆ ಕೋವಿಡ್ ಪರೀಕ್ಷೆ ನಡೆಸಿದ 100 ಮಂದಿಯಲ್ಲಿ ಶೇ. 3.4ರಷ್ಟು ಪ್ರಕರಣಗಳು ದೃಢಪಡುತ್ತಿವೆ. ಜಿಲ್ಲಾವಾರು ಉಡುಪಿ ಎರಡನೇ ಸ್ಥಾನದಲ್ಲಿದೆ. ಇದು ಇಡೀ ರಾಜ್ಯದ ಸರಾಸರಿ ನೋಡಿದರೆ, 100 ಮಾದರಿ ಪರೀಕ್ಷೆಗಳಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ನಿನ್ನೆಯವರೆಗೆ ಐದು ದಿನಗಳ ಅವಧಿಯಲ್ಲಿ ರಾಜ್ಯದ ಸರಾಸರಿ ಸೋಂಕು ಹೆಚ್ಚಳ ದರ ಶೇ. 7.1 ಆಗಿದೆ. ಇದರಲ್ಲಿ ಉಡುಪಿ ಮೂರನೇ ಸ್ಥಾನದಲ್ಲಿದ್ದು, ಶೇ. 16.7ರಷ್ಟು ಸೋಂಕು ಹೆಚ್ಚಳ ಕಂಡು ಬಂದಿದೆ ಎಂದು ಕೋವಿಡ್ -19 ಕರ್ನಾಟಕ ವಾರ್ ರೂಂನ ಮಾಹಿತಿ ತಿಳಿಸಿದೆ.

ಸಾಂಕ್ರಮಿಕವಾಗಿ ಹರಡುತ್ತಿರುವ ಕೋವಿಡ್ -19 ಪ್ರಕರಣಗಳು ದ್ವಿಗುಣಗೊಳ್ಳಲು ಉಡುಪಿ ಜಿಲ್ಲೆಯಲ್ಲಿ ಐದು ದಿನಗಳನ್ನು ತೆಗೆದುಕೊಳ್ಳುತ್ತಿದ್ದರೆ, ರಾಜ್ಯದಲ್ಲಿ ಈ ಅವಧಿ 11 ದಿನಗಳಾಗಿವೆ. ವಿಶೇಷ ಎಂದರೆ ಉಡುಪಿ ಜಿಲ್ಲೆಯ 260 ಸೋಂಕಿತರಲ್ಲಿ 8 ಜನರಿಗೆ ಮಾತ್ರ ರೋಗ ಲಕ್ಷಣ ಕಾಣಿಸಿಕೊಂಡಿದೆ. ಒಟ್ಟು 12 ಜನರು 60ವರ್ಷ ಪ್ರಾಯ ಮೇಲ್ಪಟ್ಟವರಿದ್ದಾರೆ. ಜಿಲ್ಲೆಯಲ್ಲಿ ಸೋಂಕಿಗೆ ತುತ್ತಾದ 10 ವರ್ಷ ಪ್ರಾಯದೊಳಗಿನ ಮಕ್ಕಳ ಸಂಖ್ಯೆ 40 ಮೀರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss