ಹೊಸದಿಗಂತ ವರದಿ,ಕಲಬುರಗಿ:
ಜನರ ಸಮಸ್ಯೆಗಳನ್ನು ಗುರುತಿಸಿ ಜನರ ಧ್ವನಿ ಕಾಂಗ್ರೆಸ್ ಕಾರ್ಯಕರ್ತರ ಧ್ವನಿಯಾಗಬೇಕು. ನಾವೆಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಂಕಲ್ಪದ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಕಿತ್ತೊಗೆಬೇಕು ಎನ್ನುವ ಸಂಕಲ್ಪ ತೊಡುವುದಕ್ಕಾಗಿ ಈ ಸಂಕಲ್ಪ ಸಮಾವೇಶ ಏರ್ಪಡಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸೋಮವಾರ ಕಲಬುರಗಿ ನಗರದ ಜೈಭವಾನಿ ಕನ್ವೆನ್ಶನ್ ಹಾಲ್ ನಲ್ಲಿ ನಡೆದ ಕಲಬುರಗಿ ವಿಭಾಗ-ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಪ್ರಮುಖರನ್ನು ಇಂದಿನ ಸಭೆಯಲ್ಲಿ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಇತರೆ ವಿಭಾಗಗಳಲ್ಲಿ ಈಗಾಗಲೇ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನೀವು ನಿಮಗೆ ಕೊಟ್ಟಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮ ಪಕ್ಷದ ನಾಯಕರ ಬಗ್ಗೆ ಹಾಡಿ ಹೊಗಳುವ ಬದಲು ಪಕ್ಷದ ಬಲವರ್ಧನೆ ಕುರಿತು ಮಾತನಾಡಿ ಎಂದರು.
ಪಂಚಾಯತ ಮಟ್ಟದಲ್ಲಿ ಪ್ರಜಾಪ್ರತಿನಿಧಿ ಸಮಾವೇಶ ನಡೆಸಿ. ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕ್ರಮ ಕುರಿತು ಯುವಕರನ್ನು ಸಿದ್ಧಗೊಳಿಸಿ ಡಿಜಿಟಲ್ ಹಾಗೂ ಸೋಷಿಯಲ್ ಮೀಡಿಯಾ ತಂಡವನ್ನು ರಚಿಸಬೇಕಾಗಿದೆ ಎಂದರು.
ಮುಂಬರುವ ತಾಪಂ, ಜಿಪಂ ಹಾಗೂ ವಿಧಾನಸಭೆ ಚುನಾವಣೆ ನಿಲ್ಲುವವರಿಗೆ ತರಬೇತಿ ನೀಡುವ ಯೋಜನೆಯನ್ನೂ ಕೂಡಾ ಹಾಕಿಕೊಳ್ಳಲಾಗಿದೆ. ಪಕ್ಷದ ಬೇರೆ ಬೇರೆ ಸೆಲ್ ಗಳಲ್ಲಿ ಕೆಲಸ ಮಾಡುವವರು ಅದರಲ್ಲೂ ಕೋ ಆಪರೇಟಿವ್, ಕಲ್ಚರಲ್, ಡ್ರೈವರ್ಸ್ ಸೆಲ್ ಗಳಲ್ಲಿ ಕೆಲವರನ್ನು ಗುರುತಿಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸೆಲ್ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರ ಕೋವಿಡ್ ಸಂದರ್ಭದಲ್ಲಿ ಭರವಸೆ ನೀಡಿದಂತೆ ಕೆಲವು ದುಡಿಯುವ ವರ್ಗಗಳಿಗೆ ಆರ್ಥಿಕಸಹಾಯ ಒದಗಿಸಿಲ್ಲ. ಚಾಲಕರು ಬಂದು ನನ್ನ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಸರಕಾರ ತನ್ನ ಭರವಸೆ ಪೂರ್ಣಗೊಳಿಸಲು ಹಾಗೂ ಆ ವರ್ಗದ ಜನರ ಧ್ವನಿಯನ್ನು ಸರಕಾರಕ್ಕೆ ಮುಟ್ಟಿಸಲು ನೀವೆಲ್ಲ ನಿರಂತರ ಹೋರಾಟ ಮಾಡಬೇಕು ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಎಸ್ ಆರ್ ಪಾಟೀಲ್, ವಿ.ಆರ್.ಸುದರ್ಶನ್, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಅಲ್ಲಮಪ್ರಭು ಪಾಟೀಲ್, ಎಂ ವೈ ಪಾಟೀಲ್, ಸೇರಿದಂತೆ ಮತ್ತಿತರಿದ್ದರು.