Monday, June 27, 2022

Latest Posts

ಜನವರಿ ವೇಳೆ ಕೋಲಾರ, ಬಂಗಾರಪೇಟೆಗೆ ಕುಡಿಯುವ ನೀರು: ಯರಗೋಳು ಯೋಜನೆ ಕಾಮಗಾರಿ ಪರಿಶೀಲಿಸಿ ಶಾಸಕ ಶ್ರೀನಿವಾಸ ಗೌಡ

ಕೋಲಾರ:  ಯರಗೋಳು ಯೋಜನೆ ಪೂರ್ಣಗೊಳ್ಳುವ ಹಂತ ತಲುಪಿದ್ದು, ಮುಂದಿನ ವರ್ಷದ ಜನವರಿ ವೇಳೆಗೆ ಜಿಲ್ಲೆಯ ಕೋಲಾರ,ಮಾಲೂರು,ಬಂಗಾರಪೇಟೆ ಪಟ್ಟಣಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ಬಂಗಾರಪೇಟೆ ತಾಲ್ಲೂಕಿನ ಯರಗೋಳು ಕುಡಿಯುವ ನೀರಿನ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಡ್ಯಾಂ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಈಗಾಗಲೇ ಶೇ.೮೫ ರಷ್ಟು ಕಾಮಗಾರಿ ಮುಗಿದಿದೆ, ಕಳೆದ ೨೦೦೬ರಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಇದೀಗ ಮುಗಿಯುತ್ತಿರುವುದು ಸಂತಸ ತಂದಿದೆ ಎಂದ ಅವರು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಹಿಂದೆ ತಾನು ಮಂತ್ರಿಯಾಗಿದ್ದಾಗ ಇಲ್ಲಿಗೆ ಭೇಟಿ ನೀಡಿದ್ದೆ. ಸಾಕಷ್ಟು ಪ್ರಮಾಣದಲ್ಲಿ
ನೀರು ತಮಿಳುನಾಡಿಗೆ ಹರಿದುಹೋಗುತ್ತಿತ್ತು. ಇದೀಗ ಆ ನೀರಿನ ಪ್ರಯೋಜನ ನಮ್ಮ ಜಿಲ್ಲೆಗೆ ಲಭ್ಯವಾಗಲಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿಯೂ ಕನ್ನಂಬಾಡಿ ಕಟ್ಟೆ ಮಾದರಿಯಲ್ಲಿ ಈ ಡ್ಯಾಂ ನಿರ್ಮಾಣಗೊಂಡಿದ್ದು, ಜಿಲ್ಲೆಯ ಜನರಲ್ಲಿ ಹರ್ಷವಿದೆ, ಇದನ್ನು ಪ್ರವಾಸಿ ತಾಣವಾಗಿಸುವ ಚಿಂತನೆಯೂ ಇದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
೨೦೦೬ ರ ಜು.೧೬ರಂದು ಯರಗೋಳ್ ಯೋಜನೆಗೆ ಆಡಳಿತಾತ್ಮಕ ಅನುಮೋದನೆಯನ್ನು ಪಡೆದುಕೊಂಡೆವು. ಯೋಜನೆಯ ಅಂದಾಜು ಮೊತ್ತ ೭೯ ಕೋಟಿ ರೂಗಳಾಗಿದ್ದು, ಪರಿಷ್ಕೃತ ಅಂದಾಜಿನ ಮೊತ್ತ ೧೨೮ ಕೋಟಿರೂಗಳಾಗಿ, ಹೈದರಾಬಾದ್ ಮೂಲದವರಿಗೆ ಯೋಜನೆಯನ್ನು ಗುತ್ತಿಗೆ ನೀಡಲಾಯಿತು ಎಂದರು.
ಕೋಲಾರ ನಗರಕ್ಕೆ ೩೦.೪೨ ಎಂಎಲ್‌ಡಿ ಜಲಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿ ಶೇ.೮೫ರಷ್ಟು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೋಲಾರ ನಗರದಲ್ಲಿ ಹೆಚ್ಚುವರಿ ಜಾಗ ದೊರೆಯಲು ತಡವಾಗಿರುವ ಕಾರಣ ಕಾಮಗಾರಿಯೂ ತಡವಾಗಿದೆ ಎಂದರು.
ಹಾಗೆಯೇ ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳಲ್ಲಿ ೧೩ ಎಂಎಲ್‌ಡಿ ಸಾಮರ್ಥ್ಯದ ಜಲಸಂಗ್ರಹ ಶುದ್ಧೀಕರಣ ಘಟಕಗಳ ಕಾಮಗಾರಿ ಶೇ.೪೦ರಷ್ಟು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಯರಗೋಳ್ ಯೋಜನೆಯ ಒಟ್ಟಾರೆ ಕಾಮಗಾರಿಗಳಲ್ಲಿ ಶೇ.೮೫ರಷ್ಟು ಪೂರ್ಣಗೊಂಡಿದ್ದು, ಈಗಾಗಲೇ ಯೋಜನೆಯ ಕಾಮಗಾರಿಯು ವಿಳಂಭವಾಗಿರುವುದರಿಂದಾಗಿ ಒಂದು ಬಾರಿ ೧.೫೩ ಕೋಟಿ ಹಾಗೂ ಎರಡನೇ ಬಾರಿ ೨.೧೫ ಕೋಟಿರೂ ದಂಡವನ್ನು ಗುತ್ತಿಗೆದಾರನಿಗೆ ವಿಧಿಸಲಾಗಿದೆ ಎಂದು ವಿವರಿಸಿದರು.
೩೭೫ ಎಕರೆ ನೀರು ಮುಳುಗಡೆಯಾಗಲಿದ್ದು, ಡ್ಯಾಂ ಹಿಂಭಾಗ ೫ ಕಿಮೀ ನೀರು ನಿಲ್ಲುತ್ತದೆ. ೫೦೦ ಮಿಲಿಯನ್ ಫೀಟ್ ಸಾಮರ್ಥ್ಯವನ್ನು ಡ್ಯಾಂ ಹೊಂದಿದೆ. ಡ್ಯಾಂ ನಿರ್ಮಾಣ ಕಾಮಗಾರಿ ಶೇ.೯೫ರಷ್ಟು ಪೂರ್ಣಗೊಂಡಿದೆ. ೩.೫ ಕಿಮೀ ಉದ್ದದ ಸಂಪರ್ಕ ರಸ್ತೆ ಶೇ.೮೫ರಷ್ಟು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿ ಪ್ರಗತಿಯಲ್ಲಿದೆ. ೮೧೧ ಎಂಎಂ ವ್ಯಾಸದ ಏರು ಕೊಳವೆ ಮಾರ್ಗ ೯.೧೫ ಕಿಮೀ ನಿರ್ಮಾಣ ಕಾಮಗಾರಿಯು ಶೇ.೯೫ರಷ್ಟು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಜಾಕ್‌ವೆಲ್ ನಿರ್ಮಾಣ ಕಾಮಗಾರಿಯೂ ಶೇ.೮೫ರಷ್ಟು ಪೂರ್ಣಗೊಂಡಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಅತಿಥಿಗೃಹಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆದ ಬಳಿಕ ಕ್ರಮಕೈಗೊಳ್ಳಲಾಗುವುದು.  ಯೋಜನೆಯ ಕಾಮಗಾರಿ ಪರಿಷ್ಕೃತ ಅಂದಾಜು ಮೊತ್ತ ೧೬೦ ಕೋಟಿರೂಗಳಾಗಿದ್ದು, ಇದೀಗ ೧೪೫.೧೫ ಕೋಟಿರೂ ವೆಚ್ಚವಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್, ಸದಸ್ಯರಾದ ರಾಕೇಶ್, ಸುರೇಶ್‌ಬಾಬು, ಗುಣಶೇಖರನ್, ಇನಾಯತ್, ಆಯುಕ್ತ ಶ್ರೀಕಾಂತ್, ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಮನಾಯಕ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss