ಹೊಸದಿಗಂತ ವರದಿ, ಮಂಗಳೂರು:
ನಗರದ ಕೊಡಿಯಾಲ್ಬೈಲ್ನಲ್ಲಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರ ಖಾಸಗಿ ಕಚೇರಿ ಅಟಲ್ ಸೇವಾ ಕೇಂದ್ರದಲ್ಲಿ ಸರ್ಕಾರದ ವಿವಿಧ ಸವಲತ್ತುಗಳ ಉಚಿತ ನೋಂದಣಿ ಹಾಗೂ ವಿತರಣಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ವಿಶ್ವ ಕಂಡ ಶ್ರೇಷ್ಠ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಸಾರ್ಥಕವಾಗಬೇಕಾದರೆ ಅದು ಜನಸೇವೆ ಮೂಲಕವೇ ಆಗಬೇಕು. ಆದ್ದರಿಂದ ಜನಸೇವೆಗೆ ಆದ್ಯತೆ ನೀಡಲಾಗಿದೆ ಎಂದರು.
ತಾಲೂಕು ಕಚೇರಿ ಹಾಗೂ ಇನ್ನಿತರ ಕಚೇರಿಗಳಲ್ಲಿ ವಿವಿಧ ಸವಲತ್ತುಗಳನ್ನು ಪಡೆಯಲು ಜನಸಾಮಾನ್ಯರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕಾಗಿ ಸುಲಭದಲ್ಲಿ ಎಲ್ಲ ಸೇವೆಗಳು ಒಂದೇ ಕಡೆ ಸಿಗುವಂತಾಗಲು ಈ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿ ಆಧಾರ್ ನೋಂದಣಿ, ಆಯುಷ್ಮಾನ್ ನೋಂದಣಿ, ಎಪಿಎಲ್, ಬಿಪಿಎಲ್ ಕಾರ್ಡ್ ಮುಂತಾದ ಸೇವೆಗಳನ್ನು ಜನಸಾಮಾನ್ಯರಿಗೆ ಉಚಿತವಾಗಿ ಮಾಡಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.