ಬೆಳಗಾವಿ : ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಮಹಾಸ್ವಾಮೀಜಿ ಇತ್ತೀಚೆಗೆ ಇಲ್ಲಿನ ಸುವರ್ಣ ಸೌಧದ ಮುಂದೆ ನಡೆಸಿದ ಉಪವಾಸ ಸತ್ಯಾಗ್ರಹದಿಂದ ಲಿಂಗಾಯತ ಸಮಾಜವನ್ನು ಗೊಂದಲದಲ್ಲಿ ಸಿಲುಕಿಸಿದ್ದಾರೆ ಎಂದು ಜನಸಾಮಾನ್ಯರ ಪಾರ್ಟಿಯ ಮುಖಂಡ ಹಾಗೂ ನ್ಯಾಯವಾದಿ ಯಲ್ಲಪ್ಪ ಹೆಗಡೆ ತಿಳಿಸಿದರು.
ಅವರು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬೇಕೆಂದು ಹೋರಾಟ ನಡೆಸಿದ್ದ ಸ್ವಾಮೀಜಿ ಈಗ ಕೇವಲ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಉಪವಾಸ ಧರಣಿ ನಡೆಸಿ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಲಿಂಗಾಯತ ಪಂಚಮಸಾಲಿ ಹೋರಾಟಕ್ಕೆ ಬೆಂಬಲನೋ ಅಥವಾ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೋ ಎನ್ನುವುದು ಸ್ಪಷ್ಟಪಡಿಸಲಿ ಎಂದು ಯಲ್ಲಪ್ಪ ಹೆಗಡೆ ಆಗ್ರಹಿಸಿದರು.
ರಾಜಕೀಯ ಒತ್ತಡ ಹಾಕಿ ಪಂಚಮಸಾಲಿ ಸ್ವಾಮೀಜಿ ಅವರನ್ನು ದಾರಿ ತಪ್ಪಿಸುತ್ತಿಸುವ ಕೆಲಸವನ್ನು ಕೆಲ ರಾಜಕೀಯ ನಾಯಕರು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಹೇಮಂತ ಕೆ.ಎನ್., ತುಕಾರಾಮ ಮೇಲಿನಮನಿ, ಶ್ರೀಕಾಂತ ಚುನವಾಲ ಸೇರಿದಂತೆ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.