ಹೊಸ ದಿಗಂತ ವರದಿ , ಚಿಕ್ಕಮಗಳೂರು:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಘನತೆ, ಗೌರವಕ್ಕೆ ಧಕ್ಕೆ ತರುವಂತೆ ಅವಹೇಳನಕಾರಿ ಪೋಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಜವಾರಿ ಪಂಚ್ ಮತ್ತು ಮಾರಪ್ಪಣ್ಣನ ಅಂಗಡಿ ಎನ್ನುವ ಫೇಸ್ ಬುಕ್ ಪೇಜ್ ಮತ್ತು ಅದರ ಅಡ್ಮನ್ ವಿರುದ್ಧ ನಗರ ಅಪರಾಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿ.ಟಿ.ರವಿ ಅವರ ಮಾಧ್ಯಮ ಹೇಳಿಕೆಗಳಿಗೆ ಸಂಬಂಧಿಸಿದ ಭಾವಚಿತ್ರವನ್ನು ಬಳಸಿ ಈ ಜವಾರಿ ಪಂಚ್ ಮತ್ತು ಮಾರಪ್ಪಣ್ಣನ ಅಂಗಡಿ ಎನ್ನುವ ಫೇಸ್ಬುಕ್ ಪೇಜ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ. ಇದು ಸಿ.ಟಿ.ರವಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವಾಗಿದೆ. ಈ ಪೇಜ್ಗಳಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಬಿಜೆಪಿ ನಾಯಕರುಗಳ ವಿರುದ್ಧ ಅಪಪ್ರಚರ ಮಾಡಲಾಗುತ್ತಿದೆ. ಜೊತೆಗೆ ಹಿಂದೂ ಧರ್ಮ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಪೋಸ್ಟ್ಗಳನ್ನು ಹರಿಯಬಿಡಲಾಗಿದೆ. ಈ ಕಾರಣಕ್ಕೆ ಫೇಸ್ಬುಕ್ ಪೇಜ್ ಮತ್ತು ಅಡ್ಮಿನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಸೋಷಿಯಲ್ ಮೀಡಿಯಾ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಸಂಚಾಲಕ ಚೇತನ್ ಶೆಟ್ಟಿ ದೂರು ಸಲ್ಲಿಸಿದ್ದಾರೆ.
ದೂರನ್ನಾಧರಿಸಿ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.