Monday, July 4, 2022

Latest Posts

ಜಾಗೃತಿ ಮೂಡಿಸಿದ್ದಾಯ್ತು, ಇನ್ನು ದಾಳಿ ಹೆಚ್ಚಿಸಿ ಕೇಸ್ ದಾಖಲಿಸಿ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಖಡಕ್ ಸೂಚನೆ

ಚಿತ್ರದುರ್ಗ: ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ) – 2003 ಕುರಿತು ಕಳೆದ ಎರಡ್ಮೂರು ವರ್ಷಗಳಿಂದಲೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಿದರೂ, ಕಾಯ್ದೆ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಇನ್ನು ಮುಂದೆ ಜಿಲ್ಲೆಯಲ್ಲಿ ದಾಳಿ ಹೆಚ್ಚಿಸಿ, ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಿ, ಕೇಸ್ ಕೂಡ ದಾಖಲಿಸುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯದಲ್ಲಿ ಗುಟ್ಕಾ ನಿಷೇಧಿಸಲಾಗಿದ್ದು, ಪಾನ್ ಮಸಾಲ ಮಾರಾಟ ಮಾಡಲು ಮಾತ್ರ ಅವಕಾಶವಿದೆ. ಆದರೆ ಪಾನ್ ಮಸಾಲ ಹೆಸರಿನಲ್ಲಿ ವಿವಿಧ ಕೋಡ್ ವರ್ಡ್ ಬಳಸಿ ತಂಬಾಕು ಉತ್ಪನ್ನವನ್ನು ಪಾಕೆಟ್‌ನಲ್ಲಿರಿಸಿ ನಿಯಮಬಾಹಿರವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಸಂತೆಗಳಲ್ಲಿ, ಸಣ್ಣಪುಟ್ಟ ಕಿರಾಣಿ ಅಂಗಡಿಗಳಲ್ಲಿ, ಪಾನ್‌ಶಾಪ್‌ನಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಹೆಚ್ಚಾಗಿ ಆಗುತ್ತಿದೆ ಎಂದರು.
ಜಗಿಯುವ ತಂಬಾಕು ಮಾರಾಟಕ್ಕೆ ನಿಯಮಗಳಲ್ಲಿ ಅವಕಾಶವೇ ಇಲ್ಲ. ಆದರೆ ಇದುವರೆಗೂ ಅಧಿಕಾರಿಗಳು ಇಂತಹ ಯಾವುದೇ ಪ್ರಕರಣವನ್ನು ಪತ್ತೆ ಹಚ್ಚಿ, ಅಂತಹವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಆಹಾರ ಗುಣಮಟ್ಟ ಪರಿಶೀಲನಾ ಅಧಿಕಾರಿಗಳು ಇದ್ದರೂ ಇಂತಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ತಂಬಾಕು ನಿಯಂತ್ರಣ ಕೋಶದವರು ಇದುವರೆಗೂ ವಿವಿಧೆಡೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಕುರಿತು ಜಾಗೃತಿ ಮೂಡಿಸುವುದಲ್ಲದೆ, ಉಲ್ಲಂಘನೆಯ ಕುರಿತು ದಂಡ ಮಾತ್ರ ವಿಧಿಸಿ ಸುಮ್ಮನಾಗುತ್ತಿದ್ದಾರೆ. ಹೀಗಾದಲ್ಲಿ ಹಲವಾರು ವರ್ಷಗಳ ಹಿಂದೆ ಜಾರಿಗೆ ಬಂದಿರುವ ಕಾಯ್ದೆಯ ಅನುಷ್ಠಾನ ಯಾವಾಗ ಆಗಬೇಕು? ಎಂದು ಪ್ರಶ್ನಿಸಿದರು.
ವರ್ಷಾನುಗಟ್ಟಲೆ ಜಾಗೃತಿ ಮೂಡಿಸಿದ್ದು ಸಾಕು. ಇನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ದಾಳಿ ಪ್ರಕರಣವನ್ನು ಹೆಚ್ಚಿಸಿ, ಕೋಟ್ಪಾ ಕಾಯ್ದೆ ಉಲ್ಲಂಘಿಸುವ ಮಾರಾಟ ಅಂಗಡಿಗಳ ವಿರುದ್ಧ ಕೇಸ್ ದಾಖಲಿಸಿ ಜಿಲ್ಲೆಯಲ್ಲಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ತಾಕೀತು ಮಾಡಿದರು. ಜಿಲ್ಲೆಯಲ್ಲಿ ಕೈಗೊಂಡ ದಾಳಿ, ದಂಡ ವಸೂಲಿ ಹಾಗೂ ದಾಖಲಿಸಲಾದ ಕೇಸ್‌ಗಳ ವಿವರಗಳನ್ನು ಮುಂದಿನ ಸಭೆಯಲ್ಲಿ ಮಂಡಿಸುವಂತೆ ಸೂಚನೆ ನೀಡಿದರು.
ಉಗುಳುವಿಕೆ ನಿಷೇಧ 
ಕೋವಿಡ್-೧೯ ಸೋಂಕು ಹರಡದಂತೆ ತಡೆಗಟ್ಟುವ ಸಲುವಾಗಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಈ ಆದೇಶ ಇನ್ನೂ ಜಾರಿಯಲ್ಲಿದೆ. ಉಗುಳುವುದರಿಂದಲೂ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ತಪ್ಪದೆ ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ತಹಸಿಲ್ದಾರ್, ಪೊಲೀಸ್, ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಶಾಲೆ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ
ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳ ಮೂಲಕ ಅವರ, ಮನೆಯಲ್ಲಿ ಹಿರಿಯರು ಯಾರಾದರೂ ತಂಬಾಕು ಬಳಸುತ್ತಿರುವ ಮಾಹಿತಿಯನ್ನು ಶಾಲಾ ಕಾಲೇಜುಗಳಲ್ಲಿ ಸಂಗ್ರಹಿಸಿ, ಜಾಗೃತಿ ಮೂಡಿಸುವುದರ ಜೊತೆಗೆ ತಂಬಾಕು ಮುಕ್ತ ಶಾಲೆ ಹಾಗೂ ತಂಬಾಕು ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ರವಿಶಂಕರರೆಡ್ಡಿ, ಶಾಲಾ ಕಾಲೇಜುಗಳ ಮುಖ್ಯಸ್ಥರ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಕೆಲವು ವಿದ್ಯಾರ್ಥಿಗಳನ್ನು ಒಳಗೊಂಡ ತಂಬಾಕು ನಿಯಂತ್ರಣ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ಸಭೆಗಳನ್ನು ನಿಯಮಿತವಾಗಿ ಆಯೋಜಿಸಿ, ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ೨೪೧೨ ಶಾಲೆಗಳಿದ್ದು ಶಾಲಾ ಕಟ್ಟಡಗಳಿಗೆ ಜಾಗೃತಿ ಕುರಿತ ಗೋಡೆಬರಹ ಬರೆಸಲಾಗಿದೆ. ಇನ್ನು 215 ಶಾಲೆಗಳು ಬಾಕಿ ಇದ್ದು, ಈ ವರ್ಷ ಪೂರ್ಣಗೊಳಿಸಿ, ಜಿಲ್ಲೆಯ ಎಲ್ಲ ಶಾಲೆಗಳಿಂದಲೂ ಈ ಕುರಿತು ಪ್ರಮಾಣಪತ್ರ ಪಡೆಯಲಾಗುವುದು ಎಂದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಬಿ.ಎಂ. ಪ್ರಭುದೇವ್ ಮಾತನಾಡಿ, ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು ೫೩ ದಾಳಿಗಳನ್ನು ನಡೆಸಿ, ಕೋಟ್ಪಾ ಕಾಯ್ದೆ ಉಲ್ಲಂಘನೆಯ 1627 ಪ್ರಕರಣ ಪತ್ತೆಹಚ್ಚಿ 1.40 ಲಕ್ಷ ರೂ. ದಂಡ ಮೊತ್ತ ಸಂಗ್ರಹಿಸಲಾಗಿದೆ. ಈ ವರ್ಷ 10 ದಾಳಿಗಳಲ್ಲಿ 30 ಸಾವಿರ ರೂ. ದಂಡ ವಿಧಿಸಲಾಗಿದೆ. 140 ಜಾಹೀರಾತು ಫಲಕ ತೆರವುಗೊಳಿಸಲಾಗಿದೆ. ಪೊಲೀಸ್, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳಿಗಾಗಿ 16 ತರಬೇತಿ ಕಾರ್ಯಕ್ರಮ ಹಾಗೂ 02 ಕಾರ್ಯಗಾರ ಮಾಡಲಾಗಿದೆ. 100 ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಾಂಬ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಂದಗಾವಿ, ಡಿಡಿಪಿಐ ರವಿಶಂಕರರೆಡ್ಡಿ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ, ತಹಸಿಲ್ದಾರ್ ವೆಂಕಟೇಶಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss