ಹೊಸ ದಿಗಂತ ವರದಿ, ಚಿತ್ರದುರ್ಗ:
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವುದರ ಜೊತೆಗೆ ಕಾಯ್ದೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಈಗಾಗಲೇ ಜ.18 ರಂದು ಜಾರಿಗೆ ಬಂದಿದೆ. ಈ ಕಾಯ್ದೆಯ ಕುರಿತು ಐಇಸಿ ಕಾರ್ಯಕ್ರಮದಡಿಯಲ್ಲಿ ಕಾರ್ಯಾಗಾರ, ಪ್ಲೆಕ್ಸ್, ಕರಪತ್ರಗಳ ಮೂಲಕ ಸಾರ್ವಜನಿಕರಿಗೆ ವಿವರವಾಗಿ ಮಾಹಿತಿ ನೀಡಬೇಕು ಎಂದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕೃಷ್ಣಪ್ಪ ಮಾತನಾಡಿ, ಯಾರೊಬ್ಬರೂ ಕಾನೂನಿಗೆ ವಿರುದ್ಧವಾಗಿ ಜಾನುವಾರು ಹತ್ಯೆ ನಡೆಸುವಂತಿಲ್ಲ. ಯಾವುದೇ ಜಾನುವಾರು (ದನ ಮತ್ತು ಎಮ್ಮೆ) ಹತ್ಯೆ ಮಾಡುವಂತಿಲ್ಲ. ಸಾಗಾಣಿಕೆ ಮೇಲೆ ನಿರ್ಬಂಧ ಹೇರಲಾಗಿದೆ. ಜಾನುವಾರು ಹತ್ಯೆಗಾಗಿ ಮಾರಾಟ, ಖರೀದಿ ನಿಷೇಧ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದೊಳಗೆ ಹಾಗೂ ರಾಜ್ಯದ ಹೊರಗೆ ಜಾನುವಾರು ಸಾಗಾಣಿಕೆ ಮಾಡುವ ವೇಳೆ ಹಲವಾರು ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ವಾಹನದಲ್ಲಿ ಜಾನುವಾರು ಮಾಲೀಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇನ್ನಿತರ ವಿವರಗಳನ್ನು ಅಳವಡಿಸಬೇಕಾಗುತ್ತದೆ. ರಾತ್ರಿ 8ರಿಂದ ಬೆಳಿಗ್ಗೆ 6 ರವರೆಗೆ ಜಾನುವಾರು ಸಾಗಾಟ ನಿಷೇಧಿಸಲಾಗಿದೆ. ಬೇಸಿಗೆ ಕಾಲದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಾಗಾಣಿಕೆ ಮಾಡುವಂತಿಲ್ಲ ಎಂದರು.
ಅಕ್ರಮ ಜಾನುವಾರು ಸಾಗಾಟದಲ್ಲಿ ತೊಡಗಿದವರಿಗೆ, ಮೊದಲ ಸಲ ಅಪರಾಧಕ್ಕೆ 3 ವರ್ಷದಿಂದ 7 ವರ್ಷ ಕಾರಾಗೃಹವಾಸ ಅಥವಾ ಒಂದು ಜಾನುವಾರಿಗೆ 50 ಸಾವಿರ ರೂ.ಗಳಂತೆ 5 ಲಕ್ಷದವರೆಗೆ ದಂಡ ವಿಧಿಸಬಹುದು. ಮುಂದುವರೆದ ಅಪರಾಧಕ್ಕೆ 1ಲಕ್ಷದಿಂದ 10 ಲಕ್ಷದವರೆಗೆ ದಂಡ ಅಥವಾ 7 ವರ್ಷ ಕಾರಾಗೃಹವಾಸ ದಂಡನೆ ವಿಧಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ಡಿವೈಎಸ್ಪಿ ಪಾಂಡುರಂಗ, ತಹಶೀಲ್ದಾರ್ಗಳು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು, ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರು ಉಪಸ್ಥಿತರಿದ್ದರು.